ವಿಜಯನಗರ: ಪಿಎಸ್ಐ ಅಕ್ರಮದ ಕಿಂಗ್ಪಿನ್ಗಳು ಅರೆಸ್ಟ್ ಆಗಿದ್ದಾರೆ. ಅವರಿಂದ ಮಾಹಿತಿ ಪಡೆದು ಅಕ್ರಮವಾಗಿ ಪಾಸ್ ಆದವರ ಮೇಲೆ ಕ್ರಮ ಕೈಗೊಳ್ಳಲಿ. ನೇಮಕಾತಿಯನ್ನೇ ರದ್ದು ಮಾಡುವುದು ತಪ್ಪು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಗೆ ಆಗಮಿಸಿದ ಮಾಜಿ ಸಿಎಂ ಹೆಚ್ಡಿಕೆ ಹೆಲಿಪ್ಯಾಡ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಸಂಕಷ್ಟದಲ್ಲಿಯೂ ಪರೀಕ್ಷೆ ಬರೆದು ಪಾಸ್ ಆದವರು ಬಹಳಷ್ಟು ಜನರಿದ್ದಾರೆ. ಅಂತವರಿಗೆ ಅನ್ಯಾಯವಾಗುತ್ತದೆ. ಹೀಗಾಗಿ ಮಾಹಿತಿ ಪಡೆದು ವಿಚಾರಣೆ ನಡೆಸಿ ನಿರ್ಧಾರ ಮಾಡಬೇಕು. ಯಾರು ಅಕ್ರಮ ಎಸಗಿದ್ದಾರೆಯೋ ಅವರನ್ನು ಮುಂದೆ ಯಾವುದೇ ಸರ್ಕಾರಿ ನೌಕರಿಗೆ ಅರ್ಹರಲ್ಲ ಎನ್ನುವಂತದ್ದನ್ನು ತೀರ್ಮಾನ ಮಾಡಿಕೊಳ್ಳಲಿ. ಏಕಾಏಕಿ ನಿರ್ಧಾರ ಮಾಡಿರುವುದು ತಪ್ಪು ಎಂದು ಹೇಳಿದರು.
ಆ್ಯಸಿಡ್ ದಾಳಿ ಪ್ರಕರಣಕ್ಕೆ ಪ್ರತಿಕ್ರಿಯೆ: ಈ ಬಗೆಯ ಅಮಾನವೀಯ ಘಟನೆಗಳು ನಡೆಯಬಾರದು. ಮೈಸೂರಿನಲ್ಲಿಯೂ ಬೈಕ್ ಕೊಡಿಸಿಲ್ಲ ಅಂತ ಅಕ್ಕನ ಮಗುವನ್ನೇ ಗೋಡೆಗೆಸೆದು ಕೊಲೆ ಮಾಡಲಾಗಿದೆ. ಇನ್ನು ಆ್ಯಸಿಡ್ ದಾಳಿಯಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ದಾಳಿಗೊಳಗಾದ ಅಮಾಯಕ ಹೆಣ್ಮಗಳ ಮುಂದಿನ ಪರಿಸ್ಥಿತಿಯೇನು? ಇಂತಹ ಅಮಾನವೀಯ ಘಟನೆಗಳು ಸಮಾಜಕ್ಕೆ ಮಾರಕ ಎಂದರು.