ಬಳ್ಳಾರಿ: ನಾಲ್ಕನೇ ಹಂತದ ಲಾಕ್ ಡೌನ್ ಸಡಿಲಿಕೆ ಹಿನ್ನೆಲೆ ಜಿಲ್ಲೆಯಲ್ಲಿ ಇಷ್ಟು ದಿನ ಎಣ್ಣೆ ಖರೀದಿಗೆ ಭಾರಿ ಕ್ಯೂ ನಿಂತಿದ್ದ ಗ್ರಾಹಕರು ಈಗ ತಂಬಾಕು ಖರೀದಿಗೂ ಅಂಗಡಿಗಳ ಬಳಿ ಜಮಾಯಿಸುತ್ತಿದ್ದಾರೆ.
ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ತಂಬಾಕು ಉತ್ಪನ್ನ ಮಾರುವ ಅಂಗಡಿಗಳ ಮುಂದೆ ಜನರು ನಿಂತಿದ್ದ ದೃಶ್ಯ ಕಂಡುಬಂದಿದೆ. ಬೆಳಗ್ಗೆ 5 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತ ನೂರಾರು ಮಂದಿ ಗುಟ್ಕಾ ಖರೀದಿಸುತ್ತಿದ್ದರು. ಒಬ್ಬರಿಗೆ 2 ಪ್ಯಾಕೆಟ್ ಮಾತ್ರ ವಿತರಿಸಲಾಗುತ್ತಿದ್ದು, ಒಂದು ಪ್ಯಾಕೆಟ್ ಗೆ ರೂ.125 ರಂತೆ ಮಾರಾಟ ಮಾಡಲಾಗುತ್ತಿದೆ.
ಚಿಲ್ಲರೆ ಅಂಗಡಿಗಳಲ್ಲಿ ದುಪ್ಪಟ್ಟು ಬೆಲೆಗೆ ಗುಟ್ಕಾ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ನೇರವಾಗಿ ಹೋಲ್ಸೇಲ್ ಡೀಲರ್ ಬಳಿ ಹೋಗಿ ಜಗಿಯುವ ತಂಬಾಕು ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದರು.
ಗುಟ್ಕಾ ಖರೀದಿ ವೇಳೆ ಯಾವುದೇ ಕೊರೊನಾ ಸೋಂಕಿನ ಮುಂಜಾಗ್ರತಾ ಕ್ರಮ ಪಾಲನೆ ಆಗಿಲ್ಲ. ಕನಿಷ್ಠ ಮಾಸ್ಕ್ ಧರಿಸದೇ ಸರತಿ ಸಾಲಿನಲ್ಲೇ ನಿಂತುಕೊಂಡೇ ಗುಟ್ಕಾ ಖರೀದಿಸಿದ್ದಾರೆ. ಇದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.