ಬಳ್ಳಾರಿ: ನಿವೇಶನ ಹಾಗೂ ವಸತಿ ಸೌಲಭ್ಯಕ್ಕಾಗಿ ಕರ್ನಾಟಕ ಗೃಹ ಮಂಡಳಿಗೆ ಸಲ್ಲಿಸಲಾಗಿದ್ದ ನೂರಾರು ಅರ್ಜಿದಾರರು ಈಗ ಕಚೇರಿ ಅಲೆದಾಟ ನಡೆಸುವಂತಾಗಿದೆ. ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಹಾಗೂ ನೂತನ ವಿಜಯನಗರ ಜಿಲ್ಲೆ ಘೋಷಣೆಯೇ ಅದಕ್ಕೆ ಬಹುಮುಖ್ಯ ಕಾರಣ.
2019-2000ರಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ತುಂಗಭದ್ರಾ ಸ್ಟೀಲ್ ಪ್ಲಾಂಟ್ ಲಿಮಿಟೆಡ್ನ ಅಂದಾಜು 83.63 ಎಕರೆ ಭೂಮಿಯನ್ನು ಸುಪರ್ದಿಗೆ ಪಡೆದುಕೊಂಡಿದ್ದ ಕರ್ನಾಟಕ ಗೃಹ ಮಂಡಳಿ, ನಿವೇಶನ ಒದಗಿಸಲು ನಿರ್ಧರಿಸಿತ್ತು. ಹೀಗಾಗಿ, 2019ರಲ್ಲಿ ಬಂದಿದ್ದ 1000ಕ್ಕೂ ಅಧಿಕ ಅರ್ಜಿಗಳಿಂದ ₹9.80 ಕೋಟಿ ಸಂಗ್ರಹವಾಗಿತ್ತು.
ಆದರೆ, ಕಳೆದೊಂದು ವರ್ಷದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಆ ಪ್ರಕ್ರಿಯೆಯನ್ನು ತಡೆಹಿಡಿಯುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಕೂಡಲೇ ಆ ಪ್ರಕ್ರಿಯೆಗೆ ತಡೆಯೊಡ್ಡುವಂತೆ ಗೃಹ ಮಂಡಳಿ ಹಾಗೂ ಕಂದಾಯ ಇಲಾಖೆಗೆ ರಾಜ್ಯ ಸರ್ಕಾರ ಸೂಚನೆ ನೀಡುತ್ತದೆ.
ಇದನ್ನೂ ಓದಿ...ಟ್ರ್ಯಾಕ್ಟರ್ನಲ್ಲಿದ್ದ ಮೇವಿಗೆ ವಿದ್ಯುತ್ ಸ್ಪರ್ಶ: ಸುಟ್ಟು ಭಸ್ಮವಾದ ಮೇವು
ನೂತನ ವಿಜಯನಗರ ಜಿಲ್ಲೆ ಘೋಷಣೆಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಕಚೇರಿ ಸೇರಿದಂತೆ ನಾನಾ ಇಲಾಖೆಗಳಿಗೆ ಬಳಸಿಕೊಳ್ಳುವ ಉದ್ದೇಶದಿಂದ ನಿವೇಶನ ಹಾಗೂ ವಸತಿ ಸೌಲಭ್ಯ ಹಂಚಿಕೆಗೆ ತಡೆ ನೀಡಿದೆ. ಇದರಿಂದಾಗಿ, ಫಲಾನುಭವಿಗಳು ಸಂಕಷ್ಟ ಎದುರಿಸುತ್ತಿದ್ದು, ನಿವೇಶನಕ್ಕಾಗಿ ಸಲ್ಲಿಸಿದ್ದ ಅರ್ಜಿ ಮತ್ತು ಹಣವನ್ನು ಮರಳಿಸಿ ಎಂದು ಒತ್ತಾಯಿಸಿದ್ದಾರೆ.
ಎಇಇ ಶಿವಶಂಕರ್ ಮಾತನಾಡಿ, ಸರ್ಕಾರದ ಮಟ್ಟದಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಹಣ ಮರಳಿಸಬೇಕೆ, ಇಲ್ಲವೇ ಎಂಬುದು ಗೊತ್ತಾಗುತ್ತದೆ. ಅಲ್ಲದೆ, ನೀವು ಪಾವತಿಸಿದ ಹಣಕ್ಕೆ ಬಡ್ಡಿ ಕೂಡ ಪಾವತಿಸುವುದಾಗಿ ಸರ್ಕಾರ ತೀರ್ಮಾನಿಸಿದೆ. ಅಲ್ಲಿಯವರೆಗೂ ಕಾದು ನೋಡಿ ಎಂದು ಹೇಳಿದರು.
ಕರ್ನಾಟಕ ಗೃಹ ಮಂಡಳಿ ಕಾರ್ಯಪಾಲಕ ಅಭಿಯಂತರ ಸಿ.ಲಕ್ಷ್ಮಿನಾರಾಯಣ ಸ್ವಾಮಿ ಮಾತನಾಡಿ, ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರು ತಾಳ್ಮೆ ವಹಿಸಿ ಎಂದು ಮನವಿ ಮಾಡಿದ್ದಾರೆ. ನೂತನ ಜಿಲ್ಲಾಡಳಿತ ಭವನ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಕಟ್ಟಡ ನಿರ್ಮಾಣಕ್ಕಾಗಿ ಅಷ್ಟೊಂದು ಜಾಗದ ಅಗತ್ಯ ಇದೆಯೇ ಎಂಬ ಪ್ರಶ್ನೆಗೆ, ಕೆಲ ಜಿಲ್ಲೆಗಳಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಜಿಲ್ಲಾಡಳಿತ ಮತ್ತು ವಿವಿಧ ಸರ್ಕಾರಿ ಇಲಾಖೆಗಳ ಕಟ್ಟಡಗಳಿವೆ. ಆದರೆ, ಇದ್ಯಾವ ಮಹಾಲೆಕ್ಕ ಎಂದು ಬಾಲಿಷ ಉತ್ತರ ನೀಡಿದರು.
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಫಲಾನುಭವಿ ಚನ್ನೇಶ, ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸಿಕೊಡುವಂತೆ ಅರ್ಜಿ ಸಲ್ಲಿಸಿ ಒಂದೂವರೆ ವರ್ಷವಾದರೂ ನಿವೇಶನ ಹಂಚಿಲ್ಲ. ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳು ಗೃಹ ಮಂಡಳಿ ಕಚೇರಿ ಸುತ್ತ ಅಲೆದಾಡುವಂತಾಗಿದೆ ಎಂದು ದೂರಿದ್ದಾರೆ.