ಹೊಸಪೇಟೆ: ಜಾನಪದ ಅಕಾಡೆಮಿ ಅಧ್ಯಕ್ಷೆ ಜೋಗತಿ ಮಂಜಮ್ಮ ಅವರಿಗೆ ಪದ್ಮಶ್ರೀ ಗೌರವ ಸಂದಿದೆ. ಕಲಾ ವಿಭಾಗದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಮೂಲತಃ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಕಲ್ಲುಕಂಬದ 'ತಗ್ಗಿನ ಮಠ' ಎಂಬ ಊರಿನಲ್ಲಿ ಓಣಿಯಲ್ಲಿ ಹುಟ್ಟಿದರು. ಅವರು ಪ್ರಸ್ತುತ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ವಾಸವಿದ್ದಾರೆ.
ತಮ್ಮ 18ನೇ ವಯಸ್ಸಿನಿಂದ ಕಲಾಸೇವೆಯತ್ತ ಹೆಜ್ಜೆ ಹಾಕಿದ ಅವರು, ಜನಪದ ನೃತ್ಯದ ಮೂಲಕ ಗ್ರಾಮ, ಜಾತ್ರೆ, ಸಂತೆ, ವೇದಿಕೆ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಈವರೆಗೂ ಸಾವಿರಾರು ಪ್ರದರ್ಶನಗಳನ್ನು ರಾಜ್ಯಾದ್ಯಂತ ನೀಡಿದ್ದಾರೆ. ಅವರು ಕೌಟುಂಬಿಕ ಬಹಿಷ್ಕಾರಕ್ಕೆ ಒಳಗಾಗುವ ವೇಳೆಗಾಗಲೇ ಸ್ವೀಕರಿಸಿದ್ದ ಜೋಗತಿ ವೃತ್ತಿಯನ್ನೇ ಬದುಕಿಗೆ ಆಧಾರ ಮಾಡಿಕೊಂಡರು.
ಸಂಕಷ್ಟಗಳ ನಡುವೆ ಬದುಕು ಕಟ್ಟಿಕೊಂಡ ಮಂಗಳಮುಖಿ ಜೋಗತಿ ಮಂಜಮ್ಮ ಅವರು ನಾಟಕ ಕ್ಷೇತ್ರದಲ್ಲಿ ಮಾಡಿದ ಅಪಾರ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗಿದೆ. ತೃತೀಯ ಲಿಂಗಿ ಸಮುದಾಯದಲ್ಲಿ ಮಂಜಮ್ಮ ಜೋಗತಿ ಅವರು ಮೊದಲ ಬಾರಿಗೆ ಜಾನಪದ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಜನ್ಮನಾಮ ಮಂಜುನಾಥ. ಶಾಲಾ ದಾಖಲಾತಿಗಳಲ್ಲಿ ಕುಮಾರ ಬಿ. ಮಂಜುನಾಥಶೆಟ್ಟಿ ಎಂದು ದಾಖಲಾಗಿದೆ. 1964ರ ಏಪ್ರಿಲ್ 18ರಂದು ಜನಿಸಿದರು. ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ. ತಂದೆ ಹನುಮಂತಯ್ಯ ಶೆಟ್ಟಿ, ತಾಯಿ ಜಯಲಕ್ಷ್ಮಿ.
ಮಂಜಮ್ಮ ಅವರಿಗೆ ಸಂದಿರುವ ಪ್ರಶಸ್ತಿಗಳು
- 2006: ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
- 2007 : ಜಾನಪದ ಶ್ರೀ ಪ್ರಶಸ್ತಿ
- 2008: ಜಾನಪದ ಲೋಕ ಪ್ರಶಸ್ತಿ
- 2010 : ಕನ್ನಡ ರಾಜ್ಯೋತ್ಸವ ಪ್ರಶಸ್ತಿ
- 2012 : ಶ್ರೀ ತಾಯಮ್ಮ ಮಲ್ಲಯ್ಯ ದತ್ತಿನಿಧಿ ಪ್ರಶಸ್ತಿ
- 2014: ಸಮಾಜ ಸಖಿ ಪ್ರಶಸ್ತಿ
- ಸಂದೇಶ ಪ್ರಶಸ್ತಿ