ಬಳ್ಳಾರಿ: ಕಳೆದ ಮೂರು ದಿನಗಳ ಹಿಂದೆ ನಗರದ ಕಿರು ಮೃಗಾಲಯದಲ್ಲಿನ ನಾಲ್ಕು ಮೊಸಳೆಗಳನ್ನು ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಸ್ಥಳಾಂತರ ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ನಗರದ ರೇಡಿಯೋ ಪಾರ್ಕ್ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದಿಂದ ಬಳ್ಳಾರಿಯ ಕಿರು ಮೃಗಾಲಯದ ಪ್ರಾಣಿ, ಪಕ್ಷಿಗಳನ್ನು ಕಮಲಾಪುರದಲ್ಲಿನ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಸ್ಥಳಾಂತರ ಮಾಡುವ ಆದೇಶವಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ದೊರಕಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಪ್ರಾಣಿ, ಪಕ್ಷಿಗಳ ಸ್ಥಳಾಂತರ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಸ್ಥಳೀಯರು ಪಟ್ಟುಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಮೂಲಕ ಇಂದಿನಿಂದ ಹಗಲು-ರಾತ್ರಿಯೆನ್ನದೆ ಝೂ ಮುಂದೆಯೇ ಇದ್ದು, ಪ್ರಾಣಿಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಈ ನಡುವೆ ಇಲ್ಲಿನ ಜಿಂಕೆಗಳನ್ನು ಸ್ಥಳಾಂತರ ಮಾಡಲು ಲಾರಿಯೊಂದು ಕಿರುಮೃಗಾಲಯದ ಒಳಗಡೆ ಬಂದಿತ್ತು. ಈ ವೇಳೆ ರೊಚ್ಚಿಗೆದ್ದ ರೇಡಿಯೋ ಪಾರ್ಕ್ ಸಾರ್ವಜನಿಕರು ಲಾರಿಯನ್ನು ಹೊರಗಡೆ ಕಳುಹಿಸಿದರು.
ಈ ವೇಳೆ ಈಟಿವಿ ಭಾರತದೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಎ ಎಂ ಸಂಜಯ, ಕಿರು ಮೃಗಾಲಯ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದರು.