ವಿಜಯನಗರ: ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾಷಣಕ್ಕೆ ಅಡ್ಡಿ ಪಡಿಸಿರುವ ಆರೋಪದ ಮೇಲೆ ಸಂಶೋಧನಾ ವಿದ್ಯಾರ್ಥಿಯ ನೋಂದಣಿ ರದ್ದುಗೊಳಿಸುತ್ತೇವೆ ಎಂದು ಹಂಪಿ ಕನ್ನಡ ವಿವಿ ತನ್ನ ಸಂಶೋಧನಾ ವಿದ್ಯಾರ್ಥಿಗೆ ನೋಟಿಸ್ ಜಾರಿಗೊಳಿಸಿದೆ. ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ವಿದ್ಯಾರ್ಥಿ ಎ.ಕೆ. ದೊಡ್ಡಬಸಪ್ಪ ಅವರು ಸಿಎಂ ಬೊಮ್ಮಾಯಿ ಭಾಷಣಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಗುರಿಯಾದವರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಸದರಿ ವಿದ್ಯಾರ್ಥಿಯ ನೋಂದಣಿ ರದ್ದುಗೊಳಿಸುವ ಸಂಬಂಧ ನೋಟಿಸ್ ಜಾರಿ ಮಾಡಲಾಗಿದೆ.
ಏಪ್ರಿಲ್ 16ರಂದು ಹಂಪಿ ಕನ್ನಡ ವಿವಿಯಲ್ಲಿ ವಿವಿಧ ಕಟ್ಟಡಗಳ ಹಾಗೂ ಸಂಚಾರಿ ಗ್ರಂಥಾಲಯದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ, ಸಚಿವ ಶ್ರೀರಾಮುಲು ಸೇರಿದಂತೆ ಹಲವು ರಾಜ್ಯ ಮುಖಂಡರು ಉಪಸ್ಥಿತರಿದ್ದರು.
ಸಭಾಂಗಣದಲ್ಲಿ ಸಿಎಂ ಭಾಷಣ ಮಾಡುವ ವೇಳೆ ಸಂಶೋಧನಾ ವಿದ್ಯಾರ್ಥಿ ದೊಡ್ಡಬಸಪ್ಪ ಪ್ರೋತ್ಸಾಹ ಧನದ ಕುರಿತು ಪ್ರಶ್ನೆ ಮಾಡಿದ್ದಾನೆ. ಕಳೆದೆರಡು ವರ್ಷದಿಂದ ಪ್ರೋತ್ಸಾಹ ಹಣ ಬಿಡುಗಡೆ ಮಾಡಿಲ್ಲ. ಹೀಗಾದ್ರೆ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತದೆ ಎಂದು ವಿದ್ಯಾರ್ಥಿ ದೊಡ್ಡಬಸಪ್ಪ ಪ್ರಶ್ನಿಸಿದ್ದ. ಮುಖ್ಯಮಂತ್ರಿಗಳ ಮುಂದೆ ಪ್ರಶ್ನಿಸಿದ ಹಿನ್ನೆಲೆ ವಿವಿಯ ಗೌರವಕ್ಕೆ ಧಕ್ಕೆಯಾಗಿದೆ ಎಂದು ವಿವಿ ವಿದ್ಯಾರ್ಥಿಗೆ ಕಾರಣ ಕೇಳಿ ನೋಟಿಸ್ ನೀಡಿದೆ ಎಂದು ತಿಳಿದುಬಂದಿದೆ.
ವಿದ್ಯಾರ್ಥಿಯ ಈ ನಡೆಗೆ ಇಡೀ ವಿವಿ ಆಡಳಿತ ಮಂಡಳಿ ಕೆಂಡ ಕಾರುತ್ತಿದೆ. ಮನವಿ ನೀಡಲು, ಸಮಸ್ಯೆ ಹೇಳಿಕೊಳ್ಳಲು ತನ್ನದೇ ಆದ ರೀತಿಯಿದೆ, ವೇದಿಕೆ ಇದೆ. ಅಲ್ಲಿ ಪ್ರಶ್ನಿಸೋದು ಬಿಟ್ಟು ಹೀಗೆ ಮುಖ್ಯಮಂತ್ರಿಗಳ ಮುಂದೆ ವಿವಿ ಮಾನ ತೆಗೆದರೆ ಹೇಗೆ ಎಂದು ವಿಶ್ವವಿದ್ಯಾಲಯ ಕುಲಸಚಿವ ಸುಬ್ಬಣ್ಣ ರೈ ವಿದ್ಯಾರ್ಥಿಯನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ಈ ನಡೆಗೆ ನಾಳೆ ಸಿಎಂ ನಮ್ಮನ್ನು ಕಾರಣ ಕೇಳಬಹುದು? ಎನ್ನುವುದು ವಿವಿಯ ಆತಂಕಕ್ಕೆ ಕಾರಣವಾಗಿದೆ. ಸಭೆಯಲ್ಲಿ ಸ್ವತಃ ಉನ್ನತ ಶಿಕ್ಷಣ ಸಚಿವರೇ ಆ ವಿದ್ಯಾರ್ಥಿಯನ್ನು ಸಮಾಧಾನಗೊಳಿಸಿದ್ದರು.
ವಿದ್ಯಾರ್ಥಿಯ ಈ ನಡೆ ವಿಶ್ವವಿದ್ಯಾಲಯಕ್ಕೆ ಮುಜುಗರವಾಗಿರೋ ಹಿನ್ನೆಲೆ ವಿದ್ಯಾರ್ಥಿ ದೊಡ್ಡಬಸಪ್ಪ ಅವರ ಪಿಹೆಚ್ಡಿ ನೋಂದಣಿಯನ್ನು ಏಕೆ ರದ್ದುಗೊಳಿಸಬಾರದು, ಇದಕ್ಕೆ ಮೂರು ದಿನದೊಳಗೆ ಸಮಜಾಯಿಷಿ ನೀಡುವಂತೆ ಸೂಚನೆ ನೀಡಲಾಗಿದೆ. ಇಲ್ಲವಾದಲ್ಲಿ ವಿಶ್ವವಿದ್ಯಾಲಯದಿಂದ ಬಿಡುಗಡೆ ಮಾಡುವುದಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯ ನೋಟಿಸ್ ನೀಡಿದೆ. ವಿದ್ಯಾರ್ಥಿ ನೀಡೋ ಉತ್ತರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿವಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಹಳಿತಪ್ಪುತ್ತಿರುವ ರಾಜ್ಯ ರಾಜಕಾರಣ; ಚುನಾವಣೆಗೆ ಸ್ಪರ್ಧಿಸಲು ಚಿಂತನೆ ನಡೆಸಿದ ಸ್ವಾಮೀಜಿ!
ಕಳೆದ 40 ತಿಂಗಳಿಂದ ಕನ್ನಡ ವಿವಿ ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡಿಲ್ಲ. ಈ ಹಿಂದೆಯೂ ಇದೇ ವಿಚಾರವಾಗಿ ಹಲವಾರು ಬಗೆಯ ಹೋರಾಟಗಳು ನಡೆದಿವೆ. ಆದರೂ ವಿವಿ ಹಣದ ಕೊರತೆಯ ನೆಪವೊಡ್ಡಿ ಫೆಲೋಶಿಪ್ ನೀಡಿರಲಿಲ್ಲ. ಸಿಎಂ ಭಾಷಣದ ವೇಳೆ ಇದೇ ವಿಚಾರವನ್ನೇ ನಾನು ಮಾತಾಡಿರೋದು. ಇದರಲ್ಲಿ ನನ್ನ ತಪ್ಪು ಏನೂ ಇಲ್ಲ ಎನ್ನುತ್ತಿದ್ದಾರೆ ವಿದ್ಯಾರ್ಥಿ ದೊಡ್ಡಬಸಪ್ಪ.
ನ್ಯಾಯಸಮ್ಮತವಾಗಿದ್ದನ್ನೇ ವಿದ್ಯಾರ್ಥಿಗಳು ಕೇಳುತ್ತಿದ್ದಾರೆ. ಸಿಎಂ ಸಹ ಇದರ ಬಗ್ಗೆ ಭರವಸೆ ನೀಡಿದ್ದಾರೆ. ಹೀಗಾಗಿ ವಿವಿ ದೊಡ್ಡಬಸಪ್ಪ ಅವರಿಗೆ ನೀಡಿರೋ ನೋಟಿಸ್ ಅನ್ನು ಹಿಂಪಡೆಯಬೇಕು ಎಂದು ಕೆಲ ವಿದ್ಯಾರ್ಥಿಗಳು ಮನವಿ ಮಾಡ್ತಿದ್ದಾರೆ.