ಬಳ್ಳಾರಿ/ವಿಜಯನಗರ: ರಾತ್ರಿಯಿಡಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ನಿರಂತರವಾಗಿ ಸುರಿದ ಮಳೆಯಿಂದ ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ. ಬಳ್ಳಾರಪ್ಪ ಕಾಲೋನಿ, ವೆಂಕಟೇಶ್ವರ ನಗರ, ಗಾಂಧಿ ನಗರದ ಹಿಂಭಾಗದ ಮನೆಗಳು ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಚರಂಡಿ ತುಂಬಿ ಮಳೆ ನೀರು ಮನೆಗಳಿಗೆ ನುಗ್ಗಿ ಭಾರಿ ನಷ್ಟವುಂಟಾಗಿದೆ.
ದುರ್ಗಮ್ಮನ ದೇವಸ್ಥಾನ ಬಳಿ ಹಾಗೂ ಸತ್ಯನಾರಾಯಣ ಪೇಟೆಯ ಅಂಡರ್ ಪಾಸ್ಗೆ ನೀರು ನುಗ್ಗಿದ್ದು, ಸಂಚಾರ ಬಂದ್ ಆಗಿದೆ. ವಿಜಯನಗರ ಜಿಲ್ಲೆಯ ವಿವಿಧೆಡೆ ಇಂದು ಸಹ ಭಾರಿ ಮಳೆಯಾಗಿದೆ. ಹೊಸಪೇಟೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ.
30ಕ್ಕೂ ಅಧಿಕ ಮನೆ ಜಲಾವೃತ: ಹಗರಿ ಬೊಮ್ಮನಹಳ್ಳಿ ತಾಲೂಕಿನ ರಾಯರಾಳು ತಾಂಡಾದ 30ಕ್ಕೂ ಅಧಿಕ ಮನೆಗಳು ನೀರಿನಲ್ಲಿ ಜಲಾವೃತವಾಗಿವೆ. ಮನೆಯಲ್ಲಿನ ಸಾಮಗ್ರಿಗಳೆಲ್ಲ ನೀರು ಪಾಲಾಗಿದ್ದು, ಮನೆಯೊಳಗಿನ ನೀರು ಹೊರಹಾಕಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದಾರೆ.
ಜಿ.ನಾಗಲಾಪುರ ಗ್ರಾಮದ ಹಳ್ಳದ ನೀರು ಒಮ್ಮಲೆ ಹರಿದ ಪರಿಣಾಮ ನೀರು ಗ್ರಾಮಕ್ಕೆ ನುಗ್ಗಿದೆ. ಬ್ಯಾಲಕುಂದಿ, ಗರಗ ನಾಗಲಾಪುರ ಗ್ರಾಮಗಳಲ್ಲಿ ಕೆರೆ, ಕಟ್ಟೆಗಳು ಭರ್ತಿಯಾಗಿ, ಹಳ್ಳ- ಕೊಳ್ಳಗಳು ತುಂಬಿ ಹರಿದಿವೆ. ಜಮೀನುಗಳಿಗೆ ನೀರು ನುಗ್ಗಿ ಬೆಳೆ ಸಂಪೂರ್ಣ ಹಾಳಾಗಿದೆ.
ರಜೆ: ಭಾರೀ ಮಳೆಯಾಗುತ್ತಿರುವ ಕಾರಣ ವಿಜಯನಗರ ಜಿಲ್ಲೆಯಾದ್ಯಂತ ಇಂದು ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ. ಆದೇಶ ಹೊರಡಿಸಿದ್ದಾರೆ. ಬರುವ ಭಾನುವಾರ ಹೆಚ್ಚುವರಿ ತರಗತಿಗಳನ್ನು ನಡೆಸಿ, ರಜೆ ದಿನವನ್ನು ಸರಿದೂಗಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಧಾರಾಕಾರ ಮಳೆ: ಕೊಪ್ಪಳ ಜಿಲ್ಲೆಯ ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸಿದ ಡಿಸಿ