ಬಳ್ಳಾರಿ: ಜಿಂದಾಲ್ ಸಮೂಹ ಸಂಸ್ಥೆಯು ಸ್ಥಳೀಯರಿಗೆ ಅನ್ಯಾಯ ಮಾಡಿದರೆ ನಾವಂತೂ ಸುಮ್ಮನೆ ಬಿಡಲ್ಲ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಎಚ್ಚರಿಸಿದ್ದಾರೆ.
ಮಹಾನಗರ ಪಾಲಿಕೆ ಆವರಣದಲ್ಲಿ ಹನುಮಾನ್ ಚಾಲೀಸ್ ಪುಸ್ತಕ ಬಿಡುಗಡೆಗೊಳಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯರಿಗೆ ಅನ್ಯಾಯ ಆಗಿರೋದನ್ನು ನೋಡುತ್ತಾ ಕುಳಿತುಕೊಳ್ಳೋಕೆ ಆಗಲ್ಲ. ಹಾಗಾದರೆ ನಾವ್ಯಾಕೆ ಶಾಸಕರಾಗಬೇಕು. ಜಿಂದಾಲ್ ಆದರೇನು, ಪಂದಾಲ್ ಆದರೇನು. ನಿಮಗೆ ನಷ್ಟ ಆದರೆ ಇಲ್ಲಿಂದ ಬೇರೆಡೆಗೆ ಶಿಫ್ಟ್ ಮಾಡಿಕೊಂಡು ಹೋಗಿ. ಅದಕ್ಕೆ ನಾವೇನು ಮಾಡಬೇಕು. ನಮ್ಮ ಸ್ಥಳೀಯರಿಗೆ ಅನಗತ್ಯವಾಗಿ ತೊಂದರೆ ಕೊಟ್ಟು ಉದ್ಯೋಗದಿಂದ ವಜಾಗೊಳಿಸುವ ಸಂಸ್ಕೃತಿ ಏನಾದರೂ ಜಾರಿಗೊಳಿಸಿದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅಕ್ಟೋಬರ್ ತಿಂಗಳಾಂತ್ಯಕ್ಕೆ 24ಗಂಟೆಯ ವಾಟರ್ ಸರ್ವೀಸ್:
ಅಕ್ಟೋಬರ್ ತಿಂಗಳಾಂತ್ಯಕ್ಕೆ ಮಹಾನಗರಕ್ಕೆ 24 ಗಂಟೆಯ ವಾಟರ್ ಸರ್ವೀಸ್ ನೀಡಲಾಗುವುದು. ಈಗಾಗಲೇ 9 ಝೋನ್ಗಳಲ್ಲಿ 24 ಗಂಟೆಯ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಹೊಸದಾಗಿ 8 ಝೋನ್ಗಳಿಗೆ ಅಕ್ಟೋಬರ್ ತಿಂಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದರು.
ನಾಳೆ ಜನಾರ್ದನ ರೆಡ್ಡಿ ಆಗಮನ:
ಜನಾರ್ದನ ರೆಡ್ಡಿಯವರು ನಾಳೆ ಬಳ್ಳಾರಿಗೆ ಆಗಮಿಸಲಿದ್ದು, ನೀವೇ ಅವರನ್ನು ಮಾತನಾಡಿಸಿ. ಕೊರೊನಾ ಹಿನ್ನೆಲೆ, ಅದ್ದೂರಿ ಸ್ವಾಗತ ಕಾರ್ಯಕ್ರಮ ಮಾಡದಂತೆ ಕಾರ್ಯಕರ್ತರಿಗೆ ಸೂಚಿದ್ದೇನೆ ಎಂದರು.
ತುಂಗಭದ್ರಾ ಜಲಾಶಯಕ್ಕೆ ಬಾಗಿನ:
ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಸಿಎಂ ಬಿಎಸ್ವೈ ಅವರನ್ನು ಕರೆತಂದು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಸಾರಥ್ಯದಲ್ಲಿ ಬಾಗಿನ ಅರ್ಪಿಸುತ್ತೇವೆ. ಕೋವಿಡ್ ಸೋಂಕಿನ ಹಿನ್ನಲೆ, ನನಗೆ ಕೂಡ ಹನುಮಾನ್ ಚಾಲೀಸ್ ಪಠಣೆ ಮಾಡೋಕೆ ಆಗಿಲ್ಲ. ಈ ವಾರ ಅಥವಾ ಮುಂದಿನ ವಾರದಲ್ಲಿ ಖಂಡಿತವಾಗಿಯೂ ಪಠಣ ಮಾಡುವೆ ಎಂದರು.