ಬಳ್ಳಾರಿ:ಭಾನುವಾರ ರಾತ್ರಿ 9ರ ಸುಮಾರಿಗೆ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ವ್ಯಾಪ್ತಿಯಲ್ಲಿ ಕಾಣೆಯಾಗಿದ್ದ ಬಾಲಕಿ (6) ಸೋಮವಾರ ಶವವಾಗಿ ಪತ್ತೆಯಾಗಿರೋದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ತೋರಣಗಲ್ಲಿನ ಸಮೀಪ ಬಾಲಕಿ ಮೃತದೇಹ ಪತ್ತೆಯಾಗಿದ್ದು, ಅಪಹರಿಸಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ವಡ್ಡು ಗ್ರಾಮದ ನಿವಾಸಿ ರೇವಣ್ಣ ಅಗಸರ ಎಂಬುವರು ತಮ್ಮ ಮಗಳು ಕಾಣೆಯಾದ ಕುರಿತು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಮಹೇಶಗೌಡ ಘಟನಾ ಜಾಗವನ್ನು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಈ ಪ್ರಕರಣ ವಿಚಾರಣೆ ಹಂತದಲ್ಲಿ ಇರುವಾಗಲೇ ಪ್ರತಿಕ್ರಿಯಿಸಲು ಆಗುವುದಿಲ್ಲ. ಬಾಲಕಿ ಸಾವಿಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.