ಬಳ್ಳಾರಿ: ಯುರೋಪ್ನಿಂದ ಪ್ರಾಣಿಗಳ ವಿನಿಮಯ ಮಾಡಿಕೊಳ್ಳುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಮುಂದಿಡಲಾಗುವುದು ಎಂದು ಅರಣ್ಯ ಇಲಾಖೆ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜೂಯಾಲಾಜಿಕಲ್ ಪಾರ್ಕ್ನ ಆವರಣದಲ್ಲಿಂದು ಹಂಪಿ ಮೃಗಾಲಯ ಉದ್ಘಾಟಿಸಿದ ಬಳಿಕ ಸಿಂಹ ಸಫಾರಿ ಪ್ರದೇಶದಲ್ಲಿ ಮುಕ್ತ ವಾಹನದಲ್ಲಿ ತೆರಳಿದ ಸಚಿವ ಪಾಟೀಲ್, ಯುರೋಪ್ನಿಂದ ಈಗಾಗಲೇ ಮೈಸೂರು ಮೃಗಾಲಯಕ್ಕೆ ಜಿರಾಫೆ ಸೇರಿದಂತೆ ಹಲವು ಪ್ರಾಣಿಗಳನ್ನು ತರಲಾಗಿದೆ. ಅಲ್ಲಿಂದ ಕೆಲ ಪ್ರಾಣಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು. ಯುರೋಪ್ನಿಂದ ಪ್ರಾಣಿಗಳ ವಿನಿಮಯ ಮಾಡಿಕೊಳ್ಳುವ ಪ್ರಸ್ತಾವನೆಯನ್ನೂ ಕೂಡ ರಾಜ್ಯ ಸರ್ಕಾರದ ಮುಂದಿಡಲಾಗುವುದೆಂದರು.
ಅಟಲ್ ಬಿಹಾರಿ ವಾಜಪೇಯಿ ಜೂಯಾಲಾಜಿಕಲ್ ಪಾರ್ಕ್ ಅಭಿವೃದ್ಧಿಪಡಿಸಲು 65.43 ಕೋಟಿ ರೂ.ಗಳನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ, ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿದೆ. ಸರ್ಕಾರದಿಂದ 20 ಕೋಟಿ ರೂ. ಬಿಡುಗಡೆಯಾದ ಅನುದಾನ, ಎಸ್ಎಂಡಿಸಿ ದೇಣಿಗೆ ಮತ್ತು ನಿಶ್ಚಿತ ಠೇವಣಿಯಲ್ಲಿ ಬಂದ ಬಡ್ಡಿ ಹಣದಲ್ಲಿ ಒಟ್ಟು 33 ಕೋಟಿ ರೂ. ವೆಚ್ಚದಲ್ಲಿ ಈ ಪಾರ್ಕ್ನ ಅಭಿವೃದ್ಧಿ ಕೈಗೊಳ್ಳಲಾಗಿದೆ. 3.67 ಕೋಟಿ ರೂ. ಅನುದಾನ ಉಪಯೋಗಿಸಿ ಪ್ರಾಣಿಗಳ ಆವರಣವನ್ನು ಮತ್ತು ಕೊಠಡಿಗಳನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ ಎಂದರು.
ಈ ಮೃಗಾಲಯದ ಆವರಣದಲ್ಲಿ ವನ್ಯ ಪ್ರಾಣಿಗಳ ಚಿಕಿತ್ಸೆಗಾಗಿ ಹಾಗೂ ಸಂರಕ್ಷಣೆಗಾಗಿ ಪುನರ್ವಸತಿ ಕೇಂದ್ರ ಸ್ಥಾಪನೆ ಮಾಡಲು ಮೃಗಾಲಯ ಪ್ರದೇಶ ಸೂಕ್ತ ತಾಣವಾಗಿದ್ದು, ಮೃಗಾಲಯಗಳ ಆಸ್ಪತ್ರೆ ಕಾಮಗಾರಿ ಪ್ರಗತಿಯಲ್ಲಿದೆ. ಪಾರ್ಕ್ ಅಭಿವೃದ್ಧಿಗೆ ಅಭಿವೃದ್ಧಿಗೆ ಡಿಎಂಎಫ್ ಅನುದಾನದ ಅಡಿ ಜಿಲ್ಲಾಧಿಕಾರಿಗಳು ಈಗಾಗಲೇ 5 ಕೋಟಿ ರೂ. ತೆಗೆದಿರಿಸಿದ್ದಾರೆ. ಇನ್ನೂ ಹೆಚ್ಚುವರಿಯಾಗಿ 5 ಕೋಟಿ ಒದಗಿಸುವಂತೆ ಸೂಚಿಸಲಾಗುವುದು. ಅಗತ್ಯಕ್ಕೆ ತಕ್ಕ ಸೌಲಭ್ಯಗಳನ್ನು ಒದಗಿಸಿ, ಪ್ರೇಕ್ಷಣೀಯ ಸ್ಥಳವನ್ನಾಗಿ ಮತ್ತು ಮೈಸೂರು ಮೃಗಾಲಯದ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಇನ್ನು ಕೆಎಂಇಆರ್ ಸಿ ಅನುದಾನ ಬಳಕೆ ಮಾಡುವುದಕ್ಕೆ ಸಂಬಂಧಿಸಿದಂತೆ ನ್ಯಾಯವಾದಿಗಳನ್ನು ಭೇಟಿಯಾಗಿ ಚರ್ಚಿಸಲಾಗುವುದು. ಶೀಘ್ರ ತೀರ್ಪು ಹೊರಬರುವ ಮೂಲಕ ಅನುದಾನ ಸದ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸಲಾಗುವುದು ಎಂದರು. ಈ ವೇಳೆ ಶಾಸಕ ಸೋಮಶೇಖರ ರೆಡ್ಡಿ, ಬಳ್ಳಾರಿ ಸಂಸದ ದೇವೇಂದ್ರಪ್ಪ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಪಿ.ದೀನಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ ಸೇರಿದಂತೆ ಇತರರಿದ್ದರು.