ಬಳ್ಳಾರಿ: ಒಂದು ಸಾವಿರ ಆಕ್ಸಿಜನ್ ಬೆಡ್ಗಳನ್ನ ಹೊಂದಿರುವ ತಾತ್ಕಾಲಿಕ ಆಸ್ಪತ್ರೆಯು 15 ದಿನಗಳೊಳಗೆ ಕಾರ್ಯಾರಂಭ ಮಾಡಲಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಸಮೂಹ ಸಂಸ್ಥೆ ಕಾರ್ಖಾನೆ ಎದುರು ನಿರ್ಮಾಣವಾಗುತ್ತಿರುವ ಒಂದು ಸಾವಿರ ಆಕ್ಸಿಜನ್ ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆ ಪರಿಶೀಲನೆ ನಡೆಸಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. 265 ಹಾಸಿಗೆಯುಳ್ಳ ಒಂದು ಘಟಕ ಎರಡು ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ. ಇದರ ಜೊತೆಗೆ 15 ದಿನಗಳೊಳಗೆ ಸಂಪೂರ್ಣ ಆಸ್ಪತ್ರೆ ಜನರ ಉಪಯೋಗಗಕ್ಕೆ ಬರಲಿದೆ.
ರಾಜ್ಯದಲ್ಲಿ ಆಕ್ಸಿಜನ್ ಬೆಡ್ಗಾಗಿ ಜನರು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಬಳ್ಳಾರಿಯಲ್ಲಿ ನಿರ್ಮಾಣವಾಗುತ್ತಿರುವ ಸಾವಿರ ಬೆಡ್ಗಳ ಆಸ್ಪತ್ರೆಯಿಂದ ಬಳ್ಳಾರಿ ಮತ್ತು ವಿಜಯನಗರ ಸೇರಿದಂತೆ ನೆರೆಹೊರೆಯ ಜಿಲ್ಲೆಗಳಾದ ರಾಯಚೂರು, ಕೊಪ್ಪಳ, ಚಿತ್ರದುರ್ಗ ಜಿಲ್ಲೆಗಳಿಗೂ ಅನುಕೂಲವಾಗಲಿದೆ. ಅವಳಿ ಜಿಲ್ಲೆಯ ಜನರು ಬೆಡ್ ಸಿಗುತ್ತಿಲ್ಲ ಎಂದು ಯಾವುದೇ ರೀತಿಯ ಆತಂಕಪಡುವ ಅವಶ್ಯಕತೆಯಿಲ್ಲ. ಎಲ್ಲ ರೀತಿಯ ಸಮಸ್ಯೆಗಳಿಗೆ ಈ ಆಸ್ಪತ್ರೆ ಸಹಕಾರಿಯಾಗಲಿದೆ. ಜಿಲ್ಲಾಡಳಿತ ಮತ್ತು ಜಿಂದಾಲ್ ಕಂಪನಿಯ ಈ ಒಂದು ಕಾರ್ಯ ಇಡೀ ರಾಜ್ಯಕ್ಕೆ ಮಾದರಿಯಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಿಂಗ್ ಮಾತನಾಡಿ, ರಾಜ್ಯದಲ್ಲಿ ಆಕ್ಸಿಜನ್ ಹಾಸಿಗೆಯಿಲ್ಲದೆ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಸಾವಿರ ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣ ಮಾಡಲು ಹೊರಟಿರುವ ಜಿಂದಾಲ್ ಕಂಪನಿಗೆ ಧನ್ಯವಾದಗಳು. ಜಿಲ್ಲಾಡಳಿತದ ಸಹಕಾರದೊಂದಿಗೆ ಜಿಂದಾಲ್ ಸಂಸ್ಥೆ ಜಿಲ್ಲೆಯ ಜನರ ಕಷ್ಟಕ್ಕೆ ಸ್ಪಂದಿಸುವ ಮೂಲಕ ಒಂದೊಳ್ಳೆ ಕೆಲಸಕ್ಕೆ ಮುಂದಾಗಿದ್ದಾರೆ ಎಂದರು.
ಓದಿ: ಸ್ಪೀಕರ್ ಕಾಗೇರಿ ಪಾಲ್ಗೊಂಡಿದ್ದ ಮದುವೆ ಸಮಾರಂಭದಲ್ಲಿ 32 ಜನರಿಗೆ ಕೊರೊನಾ