ಬಳ್ಳಾರಿ: ಬಾಂಗ್ಲಾ ದೇಶದ ಮೂಲದವರು ಈ ದೇಶಕ್ಕೆ ವಲಸೆ ಬಂದಾಗ, ಅವರಿಗೆ ಪೌರತ್ವ ನೀಡುವಂತೆ ಪ್ರಸ್ತಾಪ ಮಾಡಿದ್ದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು. ಅಂತಹ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಪೌರತ್ವ ಹಕ್ಕನ್ನು ಬಲಗೊಳಿಸಿದ್ದು ಪ್ರಧಾನಿ ನರೇಂದ್ರ ಮೋದಿ ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟಿದ್ದಾರೆ.
ನೂತನ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಚನ್ನಬಸವನಗೌಡ ಪಾಟೀಲ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಜಾರಿಗೊಳಿಸುವುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಅದನ್ನು ಜಾರಿಗೊಳಿಸುವ ಮುಖೇನ ಗಾಂಧೀಜಿಯವರ ವಿಚಾರಧಾರೆಯನ್ನು ಎತ್ತಿ ಹಿಡಿದಿದ್ದಾರೆ. ಹಾಗಾಗಿ, ಕಾಂಗ್ರೆಸ್ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಸುಳ್ಳು ಪ್ರಚಾರ ನಡೆಸುತ್ತಿದೆ ಎಂದು ದೂರಿದರು.
'ಸಂಘಟನಾ ಶಕ್ತಿ ಮುಖ್ಯ'
ಮುಂಬರುವ ಎಲ್ಲ ಚುನಾವಣೆಗಳನ್ನು ನಾವು ಕೇವಲ ಸಿಂಪತಿಯಿಂದಲ್ಲ, ಮಾಸ್ ಲೀಡರ್ ಅವರಿಂದಲ್ಲ. ಸಂಘಟನೆಯ ಶಕ್ತಿಯಿಂದ ಗೆಲುವು ಸಾಧಿಸಬೇಕಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ಕಟೀಲ್ ಕಾರ್ಯಕರ್ತರಿಗೆ ಕರೆ ನೀಡಿದರು.
'ಸಂಘಟನಾ ಶಕ್ತಿಯಿಲ್ಲದೆ ಕಾಂಗ್ರೆಸ್ ಕುಸಿತ'
ಕಾಂಗ್ರೆಸ್ ಸಂಘಟನಾ ಶಕ್ತಿಯಿಲ್ಲದೆ ಭಾರಿ ಕುಸಿತ ಕಂಡಿದೆ. ಅದೀಗ ವಿರೋಧ ಪಕ್ಷ ಸ್ಥಾನವನ್ನೂ ಅಲಂಕರಿಸಲೂ ಕೂಡಾ ಲಾಯಕ್ಕಿಲ್ಲದಂತಾಗಿದೆ. ಹಾಗಂತ ನಾವು ಎಚ್ಚೆತ್ತುಕೊಳ್ಳದೇ ಇರುವುದಲ್ಲ. ತಳಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ಎಚ್ಚರಿಸಿದರು.
'ಕಾಂಗ್ರೆಸ್‌ಗೆ ಯೋಗ್ಯತೆ ಇಲ್ಲ'
ನುಡಿದಂತೆ ಸಿಎಂ ಯಡಿಯೂರಪ್ಪ ಹತ್ತು ಜನರಿಗೂ ಸಚಿವ ಸ್ಥಾನ ನೀಡಿದ್ದಾರೆ. ಆದ್ರೆ ಇನ್ನೂ ಪಕ್ಷಕ್ಕೆ ರಾಜ್ಯಾಧ್ಯಕ್ಷರ ಆಯ್ಕೆ ಮಾಡಲು ಯೋಗ್ಯತೆಯಿಲ್ಲದ ಕಾಂಗ್ರೆಸ್‌ನವರು ಸಚಿವ ಸಂಪುಟದ ಬಗ್ಗೆ ಕೇವಲವಾಗಿ ಮಾತಾಡ್ತಾರೆ ಎಂದು ಕಿಡಿಕಾರಿದರು.
ಕಾಶ್ಮೀರದಲ್ಲಿ ಮೊದಲು ಪಂಡಿತರು ಬಿಟ್ಟು ಹೋಗುತ್ತಿದ್ದರು, ಎಲ್ಲಿ ನೋಡಿದ್ರು ಬಾಂಬ್ ಬೀಳುತ್ತಿತ್ತು, ಸದ್ಯ ಅವುಗಳೆಲ್ಲ ನಿಂತಿದ್ದು, ಕಾಶ್ಮೀರ ಶಾಂತವಾಗಿದೆ. ಅಲ್ಲದೆ ರಾಮ ಮಂದಿರ ಪ್ರತಿಷ್ಟಾಪನೆಯಾಗಲಿದೆ, ಇದರಿಂದಾಗಿ ಕಾಂಗ್ರೆಸ್‌ನವರು ಕಣ್ಣೀರು ಹಾಕಲು ಯಾವುದೇ ವಿಷಯ ಸಿಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಮಹಾತ್ಮಾಗಾಂಧಿ ಒಂದೇ ಮಾತರಂ ಹೇಳುವ ಮೂಲಕ ಸ್ವಾತಂತ್ರ್ಯ ತಂದು ಕೊಟ್ಟರು. ಭಾರತ ಸ್ವಾತಂತ್ರ್ಯ ಸಂದರ್ಭದಲ್ಲಿ ಜಿನ್ನಾ ಪ್ರತ್ಯೇಕವಾಗಬೇಕು ಎಂದು ಹೇಳಿದಾಗ, ಜಿನ್ನಾ ಭಾರತದಲ್ಲಿದ್ದರೆ ತನಗೆ ಅಧಿಕಾರ ಹೋಗುತ್ತೆ ಎಂದು ನೆಹರು ಯೋಚಿಸಿದರು. ಬಹುತ್ವ ಕಾಯ್ದೆ ಬರಲು ನೆಹರು ಅವರೇ ಕಾರಣ. ಗಾಂಧಿ ಟೋಪಿ, ವಿಚಾರ ತಿರಸ್ಕರಿಸಿದವರು ಕಾಂಗ್ರೆಸ್. ಆದರೆ ಪಿಎಂ ಮೋದಿ ಮಹಾತ್ಮಾಗಾಂಧಿ ಕನಸು ನನಸು ಮಾಡಿದ್ದಾರೆ. ಸಾರ್ವಜನಿಕರ ಆಸ್ತಿ ಹಾಳು ಮಾಡಿದರೆ ದೇಶದ್ರೋಹಿಗಳು ಎಂದು ಗಾಂಧಿ ಹೇಳಿದ್ದರು. ಇದೇ ಕಾರಣಕ್ಕೆ ನಾನು ಹೇಳುತ್ತೇನೆ ಕಾಂಗ್ರೆಸ್ ನವರು ದೇಶ ದ್ರೋಹಿಗಳೇ ಅಂತ ಕಟೀಲ್ ವಾಗ್ದಾಳಿ ನಡೆಸಿದ್ರು.