ಬಳ್ಳಾರಿ: ಮಹಾಮಾರಿ ಕೊರೊನಾ ಸೋಂಕು ತೊಲಗಿಸಲು ಜಿಲ್ಲೆಯ ಕುರುಗೋಡು ತಾಲೂಕಿನ ದಮ್ಮೂರು ಕಗ್ಗಲ್ ಗ್ರಾಮದಲ್ಲಿ ಮೊಸರನ್ನ ತಯಾರಿಸಿ ಗ್ರಾಮದ ಸುತ್ತಲೂ ಚೆಲ್ಲಲು ಕಾರಣೀಭೂತರಾದವರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮದ ವಿದ್ಯಾವಂತ ಯುವಕರ ಪಡೆ ಆಗ್ರಹಿಸಿದೆ.
ದಮ್ಮೂರು ಕಗ್ಗಲ್ ಗ್ರಾಮದಲ್ಲಿ ಅನ್ನ ಸಂತರ್ಪಣೆ ಹೆಸರಿನಲ್ಲಿ ಬೃಹತ್ ಮೌಢ್ಯಾಚರಣೆ ಮಾಡಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೋಕಾ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರಿಗೆ ಆ ಗ್ರಾಮದ ವಿದ್ಯಾವಂತ ಯುವಕರು ಮನವಿ ಪತ್ರವನ್ನ ಬರೆದಿದ್ದಾರೆ.
ಮೇ 21ರಂದು ಭೂತ- ಪ್ರೇತಗಳಿಗೆ ಬೃಹತ್ ಅನ್ನ ಸಂರ್ತಪಣೆ ಮಾಡಿದ್ರೆ ಈ ಮಹಾಮಾರಿ ಕೊರೊನಾ ದೂರಾಗುತ್ತೆ ಎಂಬ ಪರಿಕಲ್ಪನೆಯನ್ನ ಜನರಲ್ಲಿ ಉಂಟು ಮಾಡಿದ್ದಲ್ಲದೇ, ಮನೆ- ಮನೆಗೆ ತೆರಳಿ ಟ್ರ್ಯಾಕ್ಟರ್ ಗಟ್ಟಲೇ ಅನ್ನವನ್ನ ಸಂಗ್ರಹಿಸಿ ಗ್ರಾಮದ ಸುತ್ತಲೂ ಚೆಲ್ಲಿರೋದು ಇಡೀ ನಾಗರಿಕ ಸಮಾಜವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಇಂತಹ ಮೌಢ್ಯಾಚರಣೆಗೆ ಕಾರಣೀ ಭೂತರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುವಕರ ಪಡೆಯೊಂದು ಆಗ್ರಹಿಸಿರೋದು ಕೂಡ ಭಾರೀ ಚರ್ಚಗೆ ಗ್ರಾಸವಾಗಿದೆ. (ಸೋಂಕು ತೊಲಗಲೆಂದು ನೂರಾರು ಕೆಜಿ ಮೊಸರನ್ನ ಚೆಲ್ಲಿದ ದಮ್ಮೂರು ಕಗ್ಗಲ್ ಗ್ರಾಮಸ್ಥರು)