ಬಳ್ಳಾರಿ: ವರ್ಷವಾದ್ರೂ ಮಾಜಿ ಕಾರ್ಯದರ್ಶಿಯೊಬ್ಬರ ಬಾಕಿ ವೇತನ ಪಾವತಿಗೆ ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಿಂದೇಟು ಹಾಕುತ್ತಿದ್ದು, ಸಹಕಾರ ಸಂಘದ ಸಹಾಯಕ ಉಪನಿಬಂಧಕರ ಮೌಖಿಕ ಆದೇಶಕ್ಕೂ ಕಿಮ್ಮತ್ತು ನೀಡುತ್ತಿಲ್ಲ.
2009 ರಿಂದ 2017 ರವರೆಗೆ ಕುಂಟೋಜಿ ಬಸವನಗೌಡ ಎಂಬವರು ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ ಇವರಿಗೆ ಗಳಿಕೆ ರಜೆಯ ವೇತನ, ನಿವೃತ್ತಿ ವೇತನ ಹಾಗೂ ಸದಸ್ಯರ ಉಳಿತಾಯ ಹಣ ಸೇರಿದಂತೆ ಲಕ್ಷಾಂತರ ರೂ.ಗಳನ್ನ ನೀಡೋದು ಬಾಕಿಯಿದೆ. ಈ ಕುರಿತು ಬಳ್ಳಾರಿಯ ಸಹಕಾರ ಸಂಘಗಳ ಉಪನಿಬಂಧಕರ ಇಲಾಖೆಯ ಸಹಾಯಕ ಉಪನಿಬಂಧಕರು ಮೌಖಿಕವಾಗಿಯೇ ಕುಂಟೋಜಿ ಬಸವನಗೌಡರ ಬಾಕಿಯಿರುವ ವೇತನ ಸೇರಿದಂತೆ ಇನ್ನಿತರೆ ಹಣವನ್ನ ಕಳೆದೊಂದು ವರ್ಷದಿಂದಲೂ ಕೇಳುತ್ತಾ ಬಂದಿದ್ದಾರೆ. ಕೊಳಗಲ್ ಸಹಕಾರ ಸಂಘದ ಕಾರ್ಯದರ್ಶಿ ಮಾತ್ರ ಯಾವುದೇ ಬಾಕಿ ವೇತನ ನೀಡಲು ಮುಂದಾಗುತ್ತಿಲ್ಲ ಎಂದು ಉಪನಿಬಂಧಕರು ದೂರಿದ್ದಾರೆ.
ನನ್ನ ಮೇಲಿನ ಎಲ್ಲ ಆರೋಪಗಳು ವಿಚಾರಣೆಯಿಂದ ಸುಖಾಂತ್ಯ ಕಂಡಿವೆಯಾದ್ರೂ, ನನ್ನ ಸೇವಾವಧಿಯಲ್ಲಿನ ಸರಿಸುಮಾರು 3,38,250 ರೂ.ಗಳ ಹಣವು ಸಹಕಾರ ಸಂಘದಿಂದ ಬರಬೇಕಿದೆ. ನಾನು ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಗ್ರಾಮದಲ್ಲಿ ನೆಲೆಸಿರುವೆ. ನನ್ನ ಊರಿಂದ ಅಂದಾಜು 45-50 ಕಿ.ಮೀ ಕ್ರಮಿಸಿ, ಕೊಳಗಲ್ ಸಹಕಾರ ಸಂಘಕ್ಕೆ ಪ್ರತಿವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆಯಾದ್ರೂ ಭೇಟಿ ನೀಡುತ್ತಿರುವೆ. ಈ ವರ್ಷವಿಡೀ ಅಲೆದಾಡಿದ್ರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಾನು ಸದ್ಯ ಆರ್ಥಿಕ ಸಂಕಷ್ಟದಲ್ಲಿರುವೆ, ಕುಟುಂಬ ನಿರ್ವಹಣೆಗೂ ಕಷ್ಟದಾಯಕವಾಗಿದೆ. ಸಂಘದ ಕಾರ್ಯದರ್ಶಿ ಮಾತ್ರ ಬಾಕಿಯಿರುವ ವೇತನ ಸೇರಿದಂತೆ ಗಳಿಕೆ ರಜೆಯ ವೇತನ ನೀಡಲು ಮುಂದಾಗುತ್ತಿಲ್ಲ. ಕಾರಣ ಕೇಳಿದರೆ ಸಂಘದಲ್ಲಿ ಹಣವಿಲ್ಲವೆಂದು ಸಬೂಬು ಹೇಳುತ್ತಾರೆಂದು ಕುಂಟೋಜಿ ಬಸವನಗೌಡ ಆರೋಪಿಸಿದ್ದಾರೆ.
ಸದಸ್ಯರ ಉಳಿತಾಯ ಹಣ 60,000 ರೂ., ಸಿಬ್ಬಂದಿ ಗಳಿಕೆ ರಜೆಯ ವೇತನ 1,73,250 ರೂ. ಹಾಗೂ ನಿವೃತ್ತಿ ವೇತನ 1,05,000 ರೂ. ಬರಬೇಕಿದೆ. ಇಷ್ಟೊಂದು ಮೊತ್ತದ ಹಣ ನೀಡಬೇಕಿದ್ದು, ಸದ್ಯ ಸಂಘ ನಷ್ಟದಲ್ಲಿದೆ, ನಿಧಾನವಾಗಿ ಸಂಘದ ಬೋರ್ಡ್ ಮೀಟಿಂಗ್ ಕರೆದು ಬಾಕಿ ವೇತನ ಪಾವತಿಸೋದಾಗಿ ಕಳೆದೊಂದು ವರ್ಷದಿಂದಲೂ ಹೇಳುತ್ತಿದ್ದಾರೆ. ಆದರೆ ಈವರೆಗೂ ಯಾವುದೇ ಸಭೆ ನಡೆಸಲು ಅವರು ಮುಂದಾಗಿಲ್ಲ. ಮೊನ್ನೆ ತಾನೇ ಸಂಘದ ಕಚೇರಿಗೆ ಭೇಟಿ ನೀಡಿದಾಗಲೂ ಕೂಡ ಮತ್ತದೇ ಮಾತನ್ನ ಕಾರ್ಯದರ್ಶಿ ಹೇಳಿದ್ದಾರೆ ಎಂದು ಬಸವನಗೌಡ ತಮ್ಮ ಗೋಳನ್ನ ಹೇಳಿದರು.
ಈ ಕುರಿತು ಸಂಘದ ಕಾರ್ಯದರ್ಶಿ ಹೊನ್ನೂರುಸ್ವಾಮಿ ಅವರನ್ನು ಕೇಳಿದರೆ, ಕೊಳಗಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸರಿಸುಮಾರು 44 ಲಕ್ಷ ರೂ. ನಷ್ಟದಲ್ಲಿದೆ. ಹಾಗಾಗಿ ಮಾಜಿ ಮುಖ್ಯ ಕಾರ್ಯನಿರ್ವಾಹಕರ ಬಾಕಿಯಿರುವ ವೇತನ ಪಾವತಿ ವಿಳಂಬ ಆಗುತ್ತಿದೆ ಎಂದು ಹೇಳುತ್ತಾರೆ. ಈ ಸಂಘ ನಷ್ಟದಲ್ಲಿರುವುದಕ್ಕೂ ನೌಕರನ ವೇತನ ಪಾವತಿಯಾಗದಿರುವುದಕ್ಕೂ ಏನು ಸಂಬಂಧ? ಎಂಬ ಮಾಧ್ಯಮದವರ ಪ್ರಶ್ನೆಗೆ ಕೆಂಡಮಂಡಲವಾದ ಅವರು, ನಿಮಗೇನು ಸಹಕಾರ ಸಂಘದ ನಿಬಂಧನೆಗಳ ಕುರಿತು ತಿಳಿದಿವೆ ಹೇಳಿ ಎಂತಲೂ ಪತ್ರಕರ್ತರನ್ನೇ ಮರುಪ್ರಶ್ನಿಸಿದರು. ಬಳಿಕ ಮುಂದಿನ ತಿಂಗಳು ಬೋರ್ಡ್ ಮೀಟಿಂಗ್ ಕರೆದು ಮಾಜಿ ಮುಖ್ಯ ಕಾರ್ಯನಿರ್ವಾಹಕರ ಬಾಕಿಯಿರುವ ವೇತನ ಪಾವತಿಗೆ ಅಗತ್ಯ ಕ್ರಮ ಜರುಗಿಸಲಾಗುವುದೆಂದು ತಮ್ಮ ಮಾತಿನ ವರಸೆ ಬದಲಿಸಿದರು.