ದಾವಣಗೆರೆ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರು ಮರಳಿ ರಾಜಕೀಯಕ್ಕೆ ಬರುವುದು, ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ ಸಹೋದರ ಜನಾರ್ದನ ರೆಡ್ಡಿಯವರ ಮುಂದಿನ ರಾಜಕೀಯ ನಡೆಯ ಬಗ್ಗೆ ತಿಳಿಸದೆ ಜಾರಿಕೊಂಡರು.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಮಾತನಾಡಿದ ಅವರು, ಜನಾರ್ದನ ರೆಡ್ಡಿಯವರ ಕುರಿತು ಪಕ್ಷ ತೀರ್ಮಾನ ಮಾಡಬೇಕು. ಆಮೇಲೆ ಅವರು ತೀರ್ಮಾನಿಸಬೇಕು. ನಾನು ಅವರ ಬಳಿ ಏನೂ ಚರ್ಚೆ ಮಾಡಿಲ್ಲ ಎಂದರು.
ಇನ್ನು ಸಚಿವ ಸ್ಥಾನದ ವಿಚಾರದಲ್ಲಿ ಪಕ್ಷದ ತೀರ್ಮಾನಕ್ಕೆ ನಾನು ಬದ್ದನಾಗಿದ್ದೇನೆ, ನಾನು ಅಕಾಂಕ್ಷಿ, ಈ ಕುರಿತು ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
'ಹರಪನಹಳ್ಳಿ ಒಂಥರಾ ಫುಟ್ಬಾಲ್ ಆಗಿದೆ'
ವಿಜಯನಗರ ಜಿಲ್ಲೆಗೆ ಹರಪನಹಳ್ಳಿ ಸೇರ್ಪಡೆ ಹಿನ್ನೆಲೆಯಲ್ಲಿ ಹರಪನಹಳ್ಳಿ ಒಂತರಾ ಫುಟ್ಬಾಲ್ ಆದಂಗೆ ಆಗಿದೆ. ಕೆಲವೇ ವರ್ಷಗಳಲ್ಲಿ ಮೂರು ಜಿಲ್ಲೆಗಳನ್ನು ಕಂಡಿದೆ. ದಾಖಲೆಗಳು ವರ್ಗಾವಣೆ ಆಗಲು ತೊಂದರೆ ಆಗಿದೆ. ಲಾಗಿನ್ ಸಮಸ್ಯೆ ಆಗ್ತಿದೆ. ವಿಜಯನಗರದಲ್ಲಿ ತೊಂದರೆ ಆಗಲ್ಲ ಅನಿಸುತ್ತದೆ. ಎಲ್ಲಾ ಅಧಿಕಾರಿಗಳನ್ನು ನೇಮಿಸಿ ಪೂರ್ಣ ಪ್ರಮಾಣದಲ್ಲಿ ಕೆಲಸಕ್ಕೆ ಅವಕಾಶ ಮಾಡಿಕೊಡಬೇಕಾಗಿದೆ ಎಂದು ಪರೋಕ್ಷವಾಗಿ ಜಿಲ್ಲೆ ಬದಲಾವಣೆ ಕುರಿತು ಅಸಮಾಧಾನ ಹೊರ ಹಾಕಿದರು.
'ಪುನೀತ್ ಅವರಿಗೆ ಯಾವ ಪ್ರಶಸ್ತಿ ಕೊಟ್ಟರೂ ಕಡಿಮೆಯೇ'
ಪುನಿತ್ ನಿಶ್ಯಬ್ದವಾಗಿ ಕೆಲಸ ಮಾಡಿದ್ದು ಗೊತ್ತೇ ಆಗಿಲ್ಲ. ಲಕ್ಷಾಂತರ ಮಂದಿಗೆ ಸಹಾಯ ಮಾಡಿದ್ದಾರೆ, ಅಂತಹ ವ್ಯಕ್ತಿ ಇನ್ನೂ ಬದುಕಿರಬೇಕಿತ್ತು. ಸಿನಿಮಾ ಜೊತೆಜೊತೆಗೆ ಬಡವರ ಸೇವೆ ಮಾಡಿದ್ದಾರೆ, ಅವರಿಗೆ ಯಾವ ಪ್ರಶಸ್ತಿ ಕೊಟ್ಟರೂ ಕಡಿಮೆಯೇ ಎಂದು ಹೇಳಿದರು.
'ತೈಲ ಬೆಲೆ ಇಳಿಕೆ ಚುನಾವಣಾ ಗಿಮಿಕ್ ಅಲ್ಲ'
ತೈಲ ಬೆಲೆ ಇಳಿಕೆ ಚುನಾವಣಾ ಗಿಮಿಕ್ ಅಲ್ಲ. ಲೆಕ್ಕಾಚಾರ ನೋಡಿಕೊಂಡು ಕಡಿಮೆ ಮಾಡಲಾಗಿದೆ. ಸೋಲು ಗೆಲುವು ಮಾಮೂಲಿ. ಸಿದ್ದರಾಮಯ್ಯನನ್ನು ನೋಡಿಕೊಂಡು ದರಗಳನ್ನು ಇಳಿಕೆ ಏರಿಕೆ ಮಾಡಲ್ಲ. ಜನರಿಗೆ ನಮ್ಮ ಸರ್ಕಾರ ಒಳ್ಳೆಯದು ಮಾಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.