ಬಳ್ಳಾರಿ: ಮಂಡ್ಯ ಸಮಾವೇಶದಲ್ಲಿ ಕಾಂಗ್ರೆಸ್ ಹೆಣ ಹೊರೋನೂ ನಾನೇ. ಪಲ್ಲಕ್ಕಿ ಹೊರೋನೂ ನಾನೇ ಎಂದಿದ್ದ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯ ಹಡಗಲಿ ಪಟ್ಟಣದಲ್ಲಿ ಬಿಜೆಪಿ ಘಟಕದಿಂದ ನಡೆದ ಲೋಕಸಭಾ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. 'ಡಿಕೆಶಿ ಕಾಂಗ್ರೆಸ್ ಪಕ್ಷದ ಹೆಣ ಹೊರಲಿದ್ದಾರೆ' ಎಂದು ವ್ಯಂಗ್ಯವಾಡಿದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಸಂಪೂರ್ಣವಾಗಿ ತನ್ನ ಅಸ್ತಿತ್ವವನ್ನ ಕಳೆದುಕೊಳ್ಳಲಿದೆ. ಆಗ ಸಚಿವ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದ ಹೆಣಗಳನ್ನ ಹೊರಲಿದ್ದಾರೆ ಎಂದು ಟೀಕಿಸಿದರು.
ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಹಾಗೂ ಈ ದೇಶದ ಮತದಾರರು ಮಹತ್ವದ ಹಾಗೂ ಅಚ್ಚರಿಯ ತೀರ್ಪು ನೀಡಲಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿಯು ಅತ್ಯಧಿಕ ಸ್ಥಾನಗಳನ್ನು ಗಳಿಸಲಿದೆ. ಕಾಂಗ್ರೆಸ್ ಪಕ್ಷವು ದೇಶದೆಲ್ಲೆಡೆ ಹೀನಾಯ ಸೋಲು ಅನುಭವಿಸಲಿದೆ. ಆಗ ಸಚಿವ ಡಿ.ಕೆ. ಶಿವಕುಮಾರ್ ಪಲ್ಲಕ್ಕಿ ಹೊರೋದಿಲ್ಲ, ಅದರ ಬದಲಿಗೆ ಕಾಂಗ್ರೆಸ್ ಪಕ್ಷದ ಹೆಣಗಳನ್ನ ಹೊರಬೇಕಾಗುತ್ತದೆ. ಕಾದು ನೋಡಿ ಎಂದು ಶೆಟ್ಟರ್ ಕುಹಕವಾಡಿದರು.
ದೇಶದ ಅಭಿವೃದ್ಧಿಗಾಗಿ ರಾಜ್ಯದ ಮತದಾರರು ಈ ಚುನಾವಣೆಯಲ್ಲಿ ಬದಲಾವಣೆ ಬಯಸಿದ್ದಾರೆ. ಇದರಿಂದ ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳಿಸುತ್ತಾರೆ. ಮಂಡ್ಯದಲ್ಲಿ ಜೆಡಿಎಸ್ ಪಕ್ಷದ ಕುಟುಂಬ ರಾಜಕಾರಣವನ್ನು ಸೋಲಿಸುವ ಅಭ್ಯರ್ಥಿ ಅವಶ್ಯಕತೆ ಇತ್ತು. ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದರಿಂದ ಅವರಿಗೆ ಬಿಜೆಪಿ ಬೆಂಬಲ ನೀಡಿದೆ ಎಂದು ಶೆಟ್ಟರ್ ಹೇಳಿದರು.