ಬಳ್ಳಾರಿ: ಜಿಲ್ಲೆಯಲ್ಲಿ ಈ ಹಿಂದೆ ಒಂದು ಸಾರಿ ಸೋನಿಯಾ ಗಾಂಧಿಯನ್ನು ಗೆಲ್ಲಿಸಿದ ಪಾಪವಿದೆ. ಆದ್ರೆ, ನರೇಂದ್ರ ಮೋದಿಗೆ ಇನ್ನೊಮ್ಮೆ ಕಮಲ ಕೊಟ್ಟು ಪ್ರಾಯಶ್ಚಿತ್ತ ಮಾಡಿಕೊಳ್ಳುವ ಹೊಣೆಗಾರಿಕೆಯು ಕೂಡ ಬಳ್ಳಾರಿ ಜನರ ಮೇಲಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಗರದ ಕಿತ್ತೂರು ರಾಣಿ ಚೆನ್ನಮ್ಮ ಪ್ರೌಢ ಶಾಲಾ ಮೈದಾನದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ವೇದಿಕೆಯಲ್ಲಿ ಮಾತನಾಡಿದ ಅವರು, ಟೀಂ ಮೋದಿ ತಂಡ ನರೇಂದ್ರ ಮೋದಿ ಅವರ ಐದು ವರ್ಷದ ಅಭಿವೃದ್ಧಿ ಕಾರ್ಯಗಳ ಪರಿಚಯ ಮಾಡಿಕೊಟ್ಟಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾದ ಕೂಡಲೇ ಮಾಜಿ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿಗೆ ಕರ್ನಾಟಕದಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂದು ಪತ್ರ ಬರೆದರು. ಆದ್ರೆ, ಹಿಂದೆ ನಿಮ್ಮ ಅಜ್ಜಿ ಇಂದಿರಾ ಗಾಂಧಿಯನ್ನು ಕರ್ನಾಟಕದಿಂದ, ನಿಮ್ಮ ತಾಯಿ ಸೋನಿಯಾ ಗಾಂಧಿಯನ್ನು ಬಳ್ಳಾರಿಯಿಂದ ಜಯಶೀಲರನ್ನಾಗಿ ಮಾಡಿದ್ದೇವೆ. ನಾವು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ನಿಮ್ಮನ್ನು ಸೋಲಿಸಲು ಸಿದ್ಧರಿದ್ದೇವೆ ಎಂದು ಟಾಂಗ್ ನೀಡಿದರು.
ಯೋಗ್ಯತೆ ಇಲ್ಲದವರು ಅಧಿಕಾರಕ್ಕೆ ಬರುತ್ತಾರೆ ಎಚ್ಚರ!:
ಈ ಬಾರಿ ನರೇಂದ್ರ ಮೋದಿಯನ್ನು ಅಧಿಕಾರದಲ್ಲಿ ಕೂರಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಯೋಗ್ಯತೆ ಇಲ್ಲದವರು ಅಧಿಕಾರಕ್ಕೆ ಬರತ್ತಾರೆ. ಅಖಿಲೇಶ್ ಪ್ರಧಾನಮಂತ್ರಿ ಅಭ್ಯರ್ಥಿಯೇ?, ಮುಖ್ಯಮಂತ್ರಿ ಅಧಿಕಾರ ಕಳೆದುಕೊಂಡು ಬಂಗಲೆ ಬಿಡುವ ಪರಿಸ್ಥಿತಿ ಬಂತು. ಮಮತಾ ಬ್ಯಾನರ್ಜಿ ಪ್ರಧಾನಮಂತ್ರಿ ಅಭ್ಯರ್ಥಿಯೇ?, ಚಿಟ್ ಫಂಡ್ ಹಗರಣದಲ್ಲಿ ಮೋಸ ಮಾಡಿದವರ ಜೊತೆ ಇರುವವರು ಮಮತಾ ಬ್ಯಾನರ್ಜಿಯಾಗಿದ್ದಾರೆ. ಚಂದ್ರಬಾಬು ನಾಯ್ಡು ಪ್ರಧಾನಮಂತ್ರಿ ಅಭ್ಯರ್ಥಿಯೇ? ತನ್ನ ರಾಜ್ಯವನ್ನೇ ನಂಬದ ವ್ಯಕ್ತಿಗೆ ಅಧಿಕಾರ ನೀಡೋದಾ? ಒಟ್ಟಾರೆಯಾಗಿ ಪ್ರಧಾನಮಂತ್ರಿ ಸ್ಥಾನಕ್ಕೆ ಯೋಗ್ಯತೆ ಇರುವುದು ನರೇಂದ್ರ ಮೋದಿಗೆ ಮಾತ್ರ ಎಂದು ಚಕ್ರವರ್ತಿ ಹೇಳಿದರು.