ಬಳ್ಳಾರಿ: ಜಿಲ್ಲಾದ್ಯಂತ ಒಳಚರಂಡಿ (ಯುಜಿಡಿ) ನೀರನ್ನು ರಾಜ ಕಾಲುವೆಗೆ ಹರಿಬಿಡುವ ಮುಖೇನ ಸುತ್ತಲಿನ ಪರಿಸರ ಹದಗೆಟ್ಟಿದ್ದು, ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಒಳಚರಂಡಿ ನೀರು ಶುದ್ಧೀಕರಿಸಿ ಗಿಡ, ಮರಗಳಿಗೆ ಪೂರೈಕೆ ಮಾಡಬಹುದು ಎಂಬ ಆಲೋಚನೆಯೊಂದನ್ನು ಗಣಿ ನಗರಿಯ ಖಾಸಗಿ ಕಾಲೇಜೊಂದು ಹುಟ್ಟುಹಾಕಿದೆ.
ಹೌದು, ಬಳ್ಳಾರಿ ನಗರ ವ್ಯಾಪ್ತಿಯ ಅಲ್ಲೀಪುರ ಬಳಿಯಿರುವ ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಕಾಲೇಜು ಕಳೆದ ಎರಡು ವರ್ಷಗಳ ಹಿಂದಷ್ಟೇ ಯುಜಿಡಿ ನೀರು ಶುದ್ಧೀಕರಣ ಘಟಕವನ್ನು ಸ್ಥಾಪಿಸಿದೆ. ನಿತ್ಯ 325 ಕೆಎಲ್ಡಿ ಒಳಚರಂಡಿ ನೀರನ್ನು ಶುದ್ಧೀಕರಿಸಿ, ಅಂದಾಜು 300 ಕ್ಕೂ ಅಧಿಕ ಗಿಡ, ಮರಗಳನ್ನು ಈ ಕಾಲೇಜಿನ ಆವರಣದಲ್ಲಿ ಬೆಳೆಸಲಾಗಿದೆ. ಅದರಂತೆಯೇ ಮಳೆ ನೀರು ಕೊಯ್ಲು ಯೋಜನೆಯು ಜಾರಿಯಲ್ಲಿದೆ.
ಬೃಹತ್ ಕಾಲೇಜು ಕಟ್ಟಡದ ಕೆಳಭಾಗದಲ್ಲಿ ಮಳೆ ನೀರು ಕೊಯ್ಲಿಗೆ ಪೈಪ್ಲೈನ್ ಸಂಪರ್ಕ ಮಾಡಲಾಗಿದೆ. ಕಾಲೇಜು ಆವರಣದ ಒಂದು ಮೂಲೆಯಲ್ಲಿ ಈ ಮಳೆ ನೀರು ಸಂಗ್ರಹಗೊಳ್ಳುವ ಪಾಯಿಂಟ್ ಅನ್ನು ಗುರುತಿಸಲಾಗಿದೆ. ಆ ಮೂಲಕ ಮಳೆ ನೀರು ಕೊಯ್ಲು ಮಾಡಲಾಗುತ್ತದೆ.
70 ಲಕ್ಷ ವೆಚ್ಚದ ಯುಜಿಡಿ ನೀರಿನ ಶುದ್ಧೀಕರಣ ಘಟಕ:
ಕಳೆದ ಎರಡು ವರ್ಷಗಳ ಹಿಂದೆ ಈ ಕಾಲೇಜಿನ ಆವರಣದಲ್ಲಿ ಯುಜಿಡಿ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಲು ಅಂದಾಜು 70 ಲಕ್ಷ ರೂ. ವ್ಯಯ ಮಾಡಲಾಗಿದೆ. ಸರಿಸುಮಾರು 3 ಲಕ್ಷದ 25 ಸಾವಿರ ಕೆಎಲ್ಡಿ ನೀರನ್ನು ಶುದ್ಧೀಕರಿಸಿ ಗಿಡ, ಮರಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ಬಿಐಟಿಎಂ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಡಾ.ಯಶವಂತ ಭೂಪಾಲ ಈ ಟಿವಿ ಭಾರತಕ್ಕೆ ತಿಳಿಸಿದರು.
ಅಂದಾಜು 15 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಹಸಿರೀಕರಣಕ್ಕೆ ಆದ್ಯತೆ ನೀಡಲಾಗಿದೆ. ಯುಜಿಡಿ ನೀರು ಹೊರಗಡೆ ಹರಿ ಬಿಡುವುದರಿಂದ ಪರಿಸರ ಮಾಲಿನ್ಯ ಹಾಗೂ ಅಶುಚಿತ್ವದ ಕೊರತೆ ಎದ್ದುಕಾಣುವ ಸಾಧ್ಯತೆ ಇರುವುದರಿಂದ ಇಂತಹ ವಿನೂತನ ಪ್ರಯತ್ನಕ್ಕೆ ನಾವು ಮುಂದಾಗಿದ್ದೇವೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸ್ವಚ್ಚ ಭಾರತ್ ಮಿಷನ್ಗೆ ಈ ಯುಜಿಡಿ ನೀರಿನ ಶುದ್ಧೀಕರಣವು ಒಂದು ಭಾಗವಾಗಿದೆ. ಹಾಗಾಗಿ, ಯುಜಿಡಿ ನೀರಿನ ಶುದ್ಧೀಕರಣ ಘಟಕಕ್ಕೆ ಕೇಂದ್ರ ಸರ್ಕಾರದಿಂದ ಪ್ರಶಂಸನೀಯ ಪತ್ರವೂ ಬಂದಿದೆ ಎಂದರು.