ಬಳ್ಳಾರಿ: ಕಳೆದ ಮಾರ್ಚ್ ತಿಂಗಳಲ್ಲಿ ನಡೆದಿದ್ದ ಪಿಯು ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಗಣಿಜಿಲ್ಲೆಯ ಕೊಟ್ಟೂರು ಪಟ್ಟಣದ 'ಇಂದು' ಪಿಯು ಕಾಲೇಜಿನ ವಿದ್ಯಾರ್ಥಿಗಳು ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಸತತ ಆರು ವರ್ಷಗಳಿಂದ ಇಂದು ಪಿಯು ಕಾಲೇಜಿನ ವಿದ್ಯಾರ್ಥಿಗಳೇ ರಾಜ್ಯಕ್ಕೆ ಪ್ರಥಮ ಸ್ಥಾನವನ್ನ ಪಡೆದುಕೊಂಡಿದ್ದಾರೆ. ಹೀಗಾಗಿ, ಇಡೀ ರಾಜ್ಯಕ್ಕೆ ಇಂದು ಪಿಯು ಕಾಲೇಜು ಮಾದರಿಯಾಗಿದೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೀಗಾಗಿ, ಪ್ರತಿವರ್ಷವೂ ಕೂಡ ಬಡ ಹಾಗೂ ಕೂಲಿಕಾರ್ಮಿಕ ಕುಟುಂಬದ ವಿದ್ಯಾರ್ಥಿಗಳೇ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡು ವಿಶೇಷ ಗಮನಸೆಳೆದಿದ್ದಾರೆ.
ಕೊಟ್ಟೂರು ತಾಲೂಕಿನ ಮಹಾಜನದಹಳ್ಳಿ ಗ್ರಾಮದ ಕೃಷಿ ಕುಟುಂಬದ ಹಿನ್ನೆಲೆಯುಳ್ಳ ಕೊಟ್ರೇಶ-ಶಾಂತಮ್ಮ ದಂಪತಿಯ ಮಗ ಕರೇಗೌಡ ದಾಸನಗೌಡರ್, ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. 600 ಅಂಕಗಳಲ್ಲಿ 594 ಅಂಕ(ಇತಿಹಾಸ - 100, ಕನ್ನಡ- 97, ಸಂಸ್ಕೃತ -100, ರಾಜ್ಯಶಾಸ್ತ್ರ - 98, ಐಚ್ಛಿಕ ಕನ್ನಡ- 99, ಶಿಕ್ಷಣ -100) ಪಡೆದುಕೊಂಡಿದ್ದಾನೆ.
ಹೂವಿನ ಹಡಗಲಿ ತಾಲೂಕಿನ ಕೆಂಚಮಲ್ಲನಹಳ್ಳಿ ಗ್ರಾಮದ ನಿವಾಸಿ ಕ್ಯಾತಯ್ಯ - ಕೊಟ್ರಮ್ಮನವರ ಮಗನಾದ ಎಸ್.ಎಂ. ಸ್ವಾಮಿ, ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾನೆ. ಈತ 600ಕ್ಕೆ 592 ಅಂಕ(ಇತಿಹಾಸ - 100, ಕನ್ನಡ- 98, ಸಂಸ್ಕೃತ -100, ರಾಜ್ಯಶಾಸ್ತ್ರ - 95, ಐಚ್ಛಿಕ ಕನ್ನಡ- 98, ಶಿಕ್ಷಣ -100)ಪಡೆದುಕೊಂಡಿದ್ದಾನೆ.
ಸಿರುಗುಪ್ಪ ತಾಲೂಕಿನ ದರೂರು ಗ್ರಾಮದ ನಿವಾಸಿ ರಾಜಾಸಾಬ್ ಮಗನಾದ ಮಹಮ್ಮದ ರಫೀಕ್ ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ. ಈ ವಿದ್ಯಾರ್ಥಿ 591/600 ಅಂಕ (ಇತಿಹಾಸ - 100, ಕನ್ನಡ- 95, ಸಂಸ್ಕೃತ -100, ರಾಜ್ಯಶಾಸ್ತ್ರ - 98, ಐಚ್ಛಿಕ ಕನ್ನಡ- 98, ಶಿಕ್ಷಣ -100)ಪಡೆದುಕೊಂಡಿದ್ದಾನೆ.
19ನೇ ಸ್ಥಾನದಿಂದ 24 ನೇ ಸ್ಥಾನಕ್ಕೆ ಕುಸಿತ...
ಕಳೆದ ಶೈಕ್ಷಣಿಕ ವರ್ಷ ಸಾಲಿನ ಫಲಿತಾಂಶದಲ್ಲಿ ಗಣಿಜಿಲ್ಲೆಯು ರಾಜ್ಯಕ್ಕೆ 19ನೇ ಸ್ಥಾನ ಪಡೆದಿತ್ತು. ಈ ಬಾರಿ 24ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಕಳೆದ ಬಾರಿ ಫಲಿತಾಂಶ ಶೇ. 64.87ರಷ್ಟಿತ್ತು. ಈ ಬಾರಿ ಶೇಕಡ 62.02ಕ್ಕೆ ಇಳಿದಿದೆ.
ಪ್ರಸಕ್ತ ಸಾಲಿನಲ್ಲಿ 23,566 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 14,615 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.