ಹೊಸಪೇಟೆ: ತಾಲೂಕಿನ ಇಂದಿರಾನಗರ ಜನರು ಮೊದಲ ಬಾರಿಗೆ ಡಣಾಯಕನಕೆರೆ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಎದುರಿಸುತ್ತಿದ್ದಾರೆ.
ಇಂದಿರಾನಗರ ಆರು ತಿಂಗಳ ಹಿಂದೆ ಡಣಾಯಕನಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದೆ. ಈ ಮುಂಚೆ ಮರಿಯಮ್ಮನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿತ್ತು. ಐದು ವರ್ಷಗಳ ಹಿಂದೆ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೇರಿತು. ಸೀರಾಜ್ ಶೇಕ್ ಅವರು ಶಾಸಕರಾಗಿದ್ದಾಗ 2009ರಲ್ಲಿ ಇಂದಿರಾನಗರ ಅನುಷ್ಠಾನಕ್ಕೆ ತಂದಿದ್ದು, ಬಳಿಕ ಜನರು ಇಲ್ಲಿ ವಾಸ ಮಾಡಲು ಪ್ರಾರಂಭಿಸಿದ್ದರು. ಮರಿಯಮ್ಮನಹಳ್ಳಿ ಹೊಂದಿಕೊಂಡಂತೆ ಇಂದಿರಾನಗರವಿದ್ದು, ಈಗ ಡಣಾಯಕನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆಯಾಗಿದೆ.
ಮೂಲ ಸೌಕರ್ಯಗಳ ಸಮಸ್ಯೆ: ಇಂದಿರಾನಗರದಲ್ಲಿ 800 ಜನರು ವಾಸಿಸುತ್ತಾರೆ. ಆದರೆ, ಮನೆಗಳಿಗೆ ಶೌಚಾಲಯ, ಚರಂಡಿ ವ್ಯವಸ್ಥೆ, ಕಂಬಗಳಿಗೆ ಸಮರ್ಪಕವಾಗಿ ಬೀದಿ ದೀಪಗಳಿಲ್ಲ. ಮರಿಯಮ್ಮನಹಳ್ಳಿ ಗ್ರಾಮ ಪಂಚಾಯಿತಿ ಜನರು ತೆರಿಗೆಯನ್ನು ಪಾವತಿಸುತ್ತಾ ಬಂದಿದ್ದು, ಇಲ್ಲಿವರೆಗೂ ಜನರಿಗೆ ಮೂಲ ಸೌಕರ್ಯ ದೊರೆತಿಲ್ಲ.
ಇಂದಿರಾನಗರ ಸ್ವರೂಪ: ಇಂದಿರಾನಗರವು ಡಣಾಯಕನಕೆರೆ ಆರನೇ ಕ್ಷೇತ್ರವಾಗಿದೆ. ಇಂದಿರಾನಗರದಲ್ಲಿ ಸುಮಾರು 540 ಮತಗಳು ಬರುತ್ತವೆ. ಒಬ್ಬರು ಮೂರು ಮತಗಳನ್ನು ಚಲಾಯಿಸಿಸುವ ಹಕ್ಕನ್ನು ಹೊಂದಿದ್ದಾರೆ. ಯಾಕೆಂದರೆ ಇಲ್ಲಿ ಮೂರು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಎಸ್ಟಿ ಮಹಿಳೆ, ಸಾಮಾನ್ಯ ಮಹಿಳೆ, ಸಾಮಾನ್ಯ ಮೀಸಲಾತಿಯನ್ನು ಹೊಂದಿದೆ. 7 ಜನರು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಈಗಾಗಲೇ ಅಭ್ಯರ್ಥಿಗಳು ಚುನಾವಣೆ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.
ಓದಿ: ಮಡೆಸ್ನಾನದ ಬದಲು ಎಡೆಸ್ನಾನ: ಮುಚ್ಲಗೋಡು ದೇವಸ್ಥಾನದಲ್ಲಿ ಹರಕೆ ತೀರಿಸಿದ ಭಕ್ತರು
ಚುನಾವಣಾ ಕಣದಲ್ಲಿ ದಂಪತಿ: ಡಣಾಯಕನಕೆರೆ ಗ್ರಾಮ ಪಂಚಾಯಿತಿ ಇಂದಿರಾನಗರ ಮೂರು ಸ್ಥಾನಗಳಲ್ಲಿ ಚುನಾವಣೆ ನಡೆಯುತ್ತಿದೆ. ಇದರಲ್ಲಿ ಸೋಮಪ್ಪ ಹಾಗೂ ಅಕ್ಕಮಹಾದೇವಿ ದಂಪತಿ ಚುನಾವಣಾ ಕಣದಲ್ಲಿದ್ದಾರೆ. ಸೋಮಪ್ಪ ಸಾಮಾನ್ಯ ಹಾಗೂ ಅಕ್ಕಮಹಾದೇವಿ ಎಸ್ಟಿ ಮೀಸಲಾತಿ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದಾರೆ.