ಬಳ್ಳಾರಿ: ತುಂಗಭದ್ರಾ ನದಿ ನೀರನ್ನು ಅಕ್ರಮವಾಗಿ ಅನೇಕ ಕೈಗಾರಿಕೆಯ ಮಾಲೀಕರು ಪೈಪ್ಗಳನ್ನು ಹಾಕಿ ಕದಿಯುತ್ತಿದ್ದಾರೆ. ಅದನ್ನು ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖೆಗೆ ತಿಳಿಸಿ ಕಿತ್ತು ಹಾಕಿಸಿ, ಇಲ್ಲದಿದ್ದರೇ ನಾವೇ ಪೈಪ್ ಗಳನ್ನು ಒಡೆದು ಹಾಕುತ್ತೇವೆ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ವಿವಿಧ ಕನ್ನಡಪರ ಸಂಘಟನೆಗಳ ಜೊತೆ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, ನೀವು ನಮ್ಮ ಮೇಲೆ ಕೇಸ್ ಬುಕ್ ಮಾಡಿ, ಐಪಿಸಿ ಯಾವುದಾದ್ರೂ ಹಾಕಿ, ನಮ್ಮನ್ನ ಜೈಲಿನಲ್ಲಿ ಇಡಿ. ನಾವು ಜೈಲಿಗೆ ಹೋಗಲು ಸಿದ್ಧ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರಿಗೆ ಹೇಳಿ, ಬಳಿಕ ಮನವಿ ಪತ್ರ ಸಲ್ಲಿಸಿದರು.
ಡಿಸಿಯನ್ನು ಕೆಳಗೆ ಕರೆಸಿದ ವಾಟಾಳ್:
ಮೊದಲು ಮನವಿ ಪತ್ರ ಪಡೆಯಲು ಅಪಾರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಬಂದಿದ್ದರು. ಜಿಲ್ಲಾಧಿಕಾರಿಗಳೇ ಕೆಳಗೆ ಬರಬೇಕು, ಇಲ್ಲದಿದ್ದರೆ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ವಾಟಾಳ್ ಎಚ್ಚರಿಕೆ ನೀಡಿದರು. ಪೊಲೀಸ್ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದು, ನಂತರ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರೇ ಕೆಳಗೆ ಬಂದು ವಾಟಾಳ್ ನಾಗರಾಜ್ ಜೊತೆ ಮಾತನಾಡಿ, ಮನವಿ ಪತ್ರ ಸ್ವೀಕರಿಸಿದರು.
ಸರ್ಕಾರಕ್ಕೆ ಹೈದರಾಬಾದ್ ಕರ್ನಾಟಕವೇ ದೊಡ್ಡ ಸಮಸ್ಯೆಯಾಗಿದೆ. ಎಲ್ಲಾ ರಾಜಕಾರಣಿಗಳು ಹೈದರಾಬಾದ್ ಕರ್ನಾಟಕಕ್ಕೆ ಅನುಕೂಲ ಮಾಡಿದ್ದೇವೆ ಎಂದು ಮಾತನಾಡುತ್ತಾರೆ. ಆದರೆ ಪ್ರಮಾಣಿಕವಾಗಿ ಯಾವುದೇ ಅನುಕೂಲವಾಗಿಲ್ಲ. ಈ ಹಿಂದೆ ಅನೇಕ ಸರ್ಕಾರಗಳು ಬಂದು ಹೋಗಿವೆ. ಎಲ್ಲರೂ ವಚನ ಭ್ರಷ್ಟರಾಗಿದ್ದಾರೆ. ಹೈ.ಕ.ಗೆ ಏನೆಲ್ಲಾ ಅನುಕೂಲವಾಗಿದೆ ಎಂಬ ಕುರಿತು ಈಗಿನ ಸರ್ಕಾರ ಒಂದು ಶ್ವೇತಪತ್ರವನ್ನು ಮಂಡಿಸಲಿ ಎಂದು ಒತ್ತಾಯಿಸಿದರು.
ಕರ್ನಾಟಕ ಎಂದರೆ ಕೆಲವು ಭಾಗ ಮಾತ್ರವಾಗಿದೆ. ನೆರೆಹಾವಳಿಯಿಂದ ಉತ್ತರ ಕರ್ನಾಟಕದ ಬೆಳಗಾವಿ, ರಾಯಚೂರು ಜಿಲ್ಲೆಗಳು ನೀರಲ್ಲಿ ಮುಳುಗಿ ಹೋಗಿವೆ. ಮನೆಗಳು ಇಲ್ಲ, ವಾಹನಗಳು ಇಲ್ಲ, ಜಾನುವಾರುಗಳ ಇಲ್ಲ. ಸರ್ಕಾರ ಸಂತ್ರಸ್ತರಿಗೆ ಯಾವ ಪರಿಹಾರವನ್ನೂ ನೀಡಿಲ್ಲ, ಬರೀ ಸುಳ್ಳು, ಸುಳ್ಳು, ಸುಳ್ಳು ಎಂದರು.