ಹೊಸಪೇಟೆ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ಮಸೂದೆಗಳನ್ನು ಖಂಡಿಸಿ ಸೆ.25 ರಂದು ನಗರದ ಹೊರವಲಯದ ಟಿ.ಬಿ. ಡ್ಯಾಂ ವೃತ್ತದಲ್ಲಿರುವ ಗಣೇಶ ಗುಡಿಯ ರಾಷ್ಟ್ರೀಯ ಹೆದ್ದಾರಿಯನ್ನು ತಡೆಯಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಕೋಡಿಹಳ್ಳಿ ಚಂದ್ರಶೇಖರ ಬಣ) ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ವಿದ್ಯುಚ್ಛಕ್ತಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಕೃಷಿ ಸೇವೆಗಳ ಮಸೂದೆ ರೈತರಿಗೆ ಮರಣ ಶಾಸನಗಳಾಗಿವೆ. ಸಂಸತ್ ಮತ್ತು ವಿಧಾನ ಸಭೆಯಲ್ಲಿ ಚರ್ಚೆ ಮಾಡಿ ಕಾಯ್ದೆಗಳನ್ನು ಜಾರಿಗೆ ತರಬೇಕಿತ್ತು. ಆದರೆ, ಈ ಸಂದರ್ಭದಲ್ಲಿ ಸುಗ್ರೀವಾಜ್ಞೆ ಮೂಲಕ ತರುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.
ಸರ್ಕಾರಗಳು ಬಹುರಾಷ್ಟ್ರೀಯ ಕಂಪನಿಗಳ ಪರವಾಗಿ ನಿಂತಿವೆ. ಹಾಗಾಗಿ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಸಂಘದಿಂದ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ. ಸೆ.25 ರಂದು ಬಂದ್ ನಡೆಸಬೇಕಾಗಿತ್ತು. ಮೊದಲು ರಾಷ್ಟೀಯ ಹೆದ್ದಾರಿ ತಡೆ ನಡೆಸಲಾಗುವುದು. ಬಳಿಕ ಬಂದ್ ಕುರಿತು ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಒಂದೇ ಸಕ್ಕರೆ ಕಾರ್ಖಾನೆ ಇದ್ದು, ಇದರಿಂದ ರೈತರಿಗೆ ತೊಂದರೆ ಆಗುತ್ತಿದೆ. ರೈತರಿಗೆ ಸಾಗಣೆ ವೆಚ್ಚ ಹೆಚ್ಚಾಗುತ್ತಿದೆ. ಸಣ್ಣ ರೈತರಿಗೆ ಸ್ಥಳೀಯವಾಗಿ ಕಾರ್ಖಾನೆ ಅವಶ್ಯಕತೆ ಇದೆ. ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.