ಕೊಪ್ಪಳ: ರಾಜ್ಯದಲ್ಲಿ ಮಳೆ ಮುಂದುವರಿದಿದೆ. ಕೊಪ್ಪಳ, ವಿಜಯನಗರ ಜಿಲ್ಲೆಯಲ್ಲೂ ನಿರಂತರ ಮಳೆಯಾಗುತ್ತಿದ್ದು ಇಂದು ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಕೊಪ್ಪಳ ತಾಲೂಕಿನ ಮುದ್ಲಾಪುರ ಬಳಿಯಿರುವ ಹಿರೇಹಳ್ಳ ಜಲಾಶಯ ಭರ್ತಿಯಾಗಿದೆ. ಜಲಾಶಯದಿಂದ 17,250 ಕ್ಯೂಸೆಕ್ ನೀರನ್ನು ಹಳ್ಳಕ್ಕೆ ಬಿಡಲಾಗಿದೆ. ಈ ಬಾರಿ ಬೇಸಿಗೆಯಲ್ಲೇ ಹಿರೇಹಳ್ಳ ಜಲಾಶಯ ಭರ್ತಿಯಾಗಿದೆ. ಜಲಾಶಯ ಒಟ್ಟು 1.92 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಹಳ್ಳದ ದಡದಲ್ಲಿರುವ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ತಾಲೂಕಿನ ರಘುನಾಥನಹಳ್ಳಿಯಲ್ಲಿ ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಅಳವಂಡಿ ಹೋಬಳಿಯ ಸುಮಾರು 50 ಎಕರೆ ಜಮೀನಿಗೆ ನೀರು ನುಗ್ಗಿ ಬೆಳೆದು ನಿಂತಿದ್ದ ಮೆಕ್ಕೆ ಜೋಳ ನೆಲಸಮ ಮಾಡಿದ್ದು, ರೈತರು ಕಂಗಾಲಾಗಿದ್ದಾರೆ.
ವಿಜಯನಗರದಲ್ಲಿ ಮಳೆಯಾರ್ಭಟ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಬಿಟ್ಟೂಬಿಡದೇ ಮಳೆ ಸುರಿಯುತ್ತಿದ್ದು ಕೂಡ್ಲಿಗಿ, ಹೂವಿನ ಹಡಗಲಿ, ಹರಪನಹಳ್ಳಿ ಶಾಲೆಗಳಿಗೆ ಇಂದು ಒಂದು ದಿನ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಆದೇಶಿಸಿದ್ದಾರೆ.
ಅವಳಿ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ. ಹೊಸಪೇಟೆ ಹಾಗೂ ಕೂಡ್ಲಿಗಿ ತಾಲೂಕಿನ 10 ಮನೆಗಳು ನೆಲಸಮವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹರಪನಹಳ್ಳಿ-ಉಚ್ಚಂಗಿದುರ್ಗಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಬಂದ್ ಆಗಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತಾಳೂರು, ಕರೂರು, ಸಿರಿಗೇರಿ, ತೆಕ್ಕಲಕೋಟೆ, ಎಂ.ಸೂಗೂರು ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು, ಜಮೀನಿನಲ್ಲಿ ನೀರು ನಿಂತಿದೆ. ಕಳೆದ ವಾರವಷ್ಟೇ ಉಳುಮೆ ಮಾಡಿದ್ದು ಬೆಳೆ ನಷ್ಟವಾಗಿ ರೈತರು ಕಂಗಾಲಾಗಿದ್ದಾರೆ.
ನೆರೆಯ ಆಂಧ್ರ ಪ್ರದೇಶದ ಗಡಿಭಾಗದಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದ ವೇದಾವತಿ ನದಿ ನೀರಿನ ಮಟ್ಟ ಹೆಚ್ಚಾಗಿ ಕರ್ನಾಟಕ-ಆಂಧ್ರಕ್ಕೆ ಸಂಪರ್ಕ ಕಲ್ಪಿಸುವ ರಾರಾವಿ ಸಮೀಪದ ಸೇತುವೆ ಮೇಲೆ ನೀರು ಹರಿಯುತ್ತಿದೆ. ಪರಿಣಾಮ, ಸಂಚಾರಕ್ಕೆ ಅಡೆತಡೆ ಉಂಟಾಗಿದೆ.