ವಿಜಯನಗರ: ಹಂಪಿಯ ಕನ್ನಡ ವಿಶ್ವವಿದ್ಯಾಲಯ ಮತ್ತೊಂದು ಯಡವಟ್ಟು ಮಾಡಿಕೊಂಡು ಹೋರಾಟಗಾರರ ಸಾಧಕರ ಕೆಂಗಣ್ಣಿಗೆ ಗುರಿಯಾಗಿದೆ. ಹೌದು ಪ್ರತಿವರ್ಷ ನಡೆಯುವ ನುಡಿಹಬ್ಬದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ವಿಶ್ವವಿದ್ಯಾಲಯವು ನಾಡೋಜ ಪದವಿಯನ್ನು ನೀಡಿ ಗೌರವಿಸುತ್ತಾ ಬಂದಿದೆ. ಇದುವರೆಗೂ ಸುಮಾರು 90 ಕ್ಕೂ ಅಧಿಕ ಸಾಧಕರು ನಾಡೋಜ ಪದವಿಗೆ ಭಾಜನರಾಗಿದ್ದಾರೆ.
ಆದರೀಗ ಅವರ ಹೆಸರಿನ ಮುಂದೆ ನಾಡೋಜ ಪದವಿಯನ್ನು ಬಳಸಬಾರದು ಎಂದು ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ವಿಚಾರಕ್ಕೆ ಸಾಧಕರ ಆಕ್ರೋಶ ವ್ಯಕ್ತವಾಗಿದೆ. ಫೆಬ್ರವರಿ 14 ರಂದು ನಡೆದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡಲಾಗಿದೆ.
ನಾಡೋಜ ಪ್ರಶಸ್ತಿಗೆ ಭಾಜನರಾಗಿರೋ ಮಹೇಶ್ ಜೋಷಿ ಅವರು ನಾಡೋಜ ಪದ ಬಳಕೆಯ ಕುರಿತು ಪತ್ರ ಬರೆದು ವಿವರಣೆ ಕೇಳಿದ್ದ ಹಿನ್ನೆಲೆಯಲ್ಲಿ ಚರ್ಚೆನಡೆದು ನಿರ್ಣಯಕ್ಕೆ ಬರಲಾಗಿದೆ. ಈ ಕುರಿತು ಸ್ಪಷ್ಟನೆ ಕೇಳಲು ಕುಲಪತಿ ಡಾ. ಸ. ಚಿ. ರಮೇಶ್ ಅವರಿಗೆ ಕರೆ ಮಾಡಿದರೆ ಸಚಿವರ ಜೊತೆ ಮೀಟಿಂಗ್ನಲ್ಲಿ ಇದ್ದಾರೆ ಎಂದು ಒಮ್ಮೆ ಹೇಳಿದರೆ ಮತ್ತೆ ಕರೆಮಾಡಿದರೆ ಪ್ರತಿಕ್ರಿಯೆ ನೀಡುತ್ತಿಲ್ಲ.
ನಾಡೋಜ ಪದ ಬಳಕೆ ಬೇಡ ಎಂದು ತೆಗೆದುಕೊಂಡಿರೋ ತೀರ್ಮಾನಕ್ಕೆ ಹೋರಾಟಗಾರರಲ್ಲಿಯೂ ಆಕ್ರೋಶ ವ್ಯಕ್ತವಾಗಿದೆ. ಕನ್ನಡ ಅಸ್ಮಿತೆಗಾಗಿ ಹೋರಾಡಿದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಅವಮಾನ ತರುವ ತೀರ್ಮಾನ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಈ ನಿರ್ಧಾರ ವಾಪಸ್ ಪಡೆಯದಿದ್ದಲ್ಲಿ ಹೋರಾಟ ಅನಿವಾರ್ಯ ಎಂದೂ ಸಹ ಎಚ್ಚರಿಕೆ ನೀಡಿದ್ದಾರೆ.
ಕನ್ನಡ ವಿಶ್ವವಿದ್ಯಾಲಯದ ಈಗಿನ ಆಡಳಿತ ವ್ಯವಸ್ಥೆಯನ್ನು ನೋಡಿದರೆ ಇದು ಲಗಾಮಿಲ್ಲದ ಕುದುರೆಯಂತಾಗಿದೆ ಎನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಗೌರವ ಪದವಿ ನೀಡಿ, ಅದನ್ನು ಬಳಸಬೇಡಿ ಎಂದರೆ ಅದ್ಯಾವ ಲೆಕ್ಕವೋ ಅರ್ಥವಾಗುತ್ತಿಲ್ಲ. ವಿವಿಯ ಕುಲಾಧಿಪತಿಗಳೂ ಆದ ರಾಜ್ಯಪಾಲರು ಕೂಡಲೇ ಇದನ್ನು ಸರಿಪಡಿಸಬೇಕು ಮತ್ತು ಮುಂದೆ ವಿವಿಯು ಇಂತಹ ಯಡವಟ್ಟು ಮಾಡದ ಹಾಗೇ ಸೂಚಿಸುವುದು ಅನಿವಾರ್ಯವಾಗಿದೆ.
ಇದನ್ನೂ ಓದಿ: ಧ್ವನಿವರ್ಧಕಗಳ ತೆರವಿಗೆ ಗಡುವು ನೀಡಲು ಪ್ರಮೋದ್ ಮುತಾಲಿಕ್ ಯಾರು?: ಶಾಸಕ ಜಮೀರ್ ವಾಗ್ದಾಳಿ