ಬಳ್ಳಾರಿ: ಪ್ರಾರಂಭದಲ್ಲಿ ಕಲ್ಲುಗಳಿಂದ ಕೂಡಿ ಜನವಸತಿಗೆ ಅಷ್ಟಾಗಿ ಯೋಗ್ಯವೆನಿಸಿರದ ಸಣ್ಣ ಸ್ಥಳವೊಂದು ಇದೀಗ ಐತಿಹಾಸಿಕತೆ ಹೊಂದಿರುವುದರ ಜೊತೆಗೆ ಧಾರ್ಮಿಕ ಆಚರಣೆಗಳಿಗೂ ಹೆಸರುವಾಸಿಯಾಗಿದ್ದು, ಜನರ ಕಣ್ಮನ ಸೆಳೆಯುತ್ತಿದೆ.
ಹೌದು, ಆರಂಭದ ದಿನಗಳಲ್ಲಿ ಗುಡ್ಡದಂತಹ ಸಣ್ಣ ಭೌಗೋಳಿಕ ನೆಲೆಯನ್ನು ಹೊಂದಿದ್ದ ಗ್ರಾಮವೊಂದು ಚೇಳುಗಳಿಂದಲೇ ತುಂಬಿ ತುಳುಕುತ್ತಿತ್ತು. ದಿನ ಕಳೆದ ಹಾಗೆ ಚೇಳುಗಳಿದ್ದ ಗ್ರಾಮ ಬದಲಾಗಿ ಚೇಳ್ಳಗುರ್ಕಿ ಗ್ರಾಮ ಎಂಬ ಹೆಸರು ಬಂದಿತು.
ಅಷ್ಟೇ ಅಲ್ಲದೇ ಈ ಗ್ರಾಮಕ್ಕೆ ಐತಿಹಾಸ ಕೂಡ ಇದ್ದು, ಜೀವಸಮಾಧಿಯಾಗಿದ್ದ ಎರ್ರಿತಾತನವರು ಆ ಗ್ರಾಮದಲ್ಲಿ ನೆಲೆ ನಿಂತ ಮೇಲೆ ಅವರ ಹೆಸರಿನೊಂದಿಗೆ ಚೇಳ್ಳಗುರ್ಕಿ ಗ್ರಾಮವೆಂದೂ ಹೆಸರಿಸಲಾಯಿತು ಎನ್ನುವುದು ಕೆಲವರ ವಾದ. ಅದಕ್ಕೂ ಮುಂಚೆ ಚೇಳುಗಳಿದ್ದ ಊರು ಎಂದೇ ಜನರಿಂದ ಕರೆಯಲ್ಪಟ್ಟಿತ್ತು ಎಂದು ಇತಿಹಾಸ ಕಾರರ ವ್ಯಾಖ್ಯಾನವಾಗಿದೆ. ಪ್ರಾರಂಭದಲ್ಲೇ ಕಲ್ಲುಗಳಿಂದ ಕೂಡಿದ್ದ, ಸಣ್ಣ ಗುಡ್ಡದಂಥ ಭೌಗೋಳಿಕ ನೆಲೆಯನ್ನು ಹೊಂದಿದ್ದ ಈ ಗ್ರಾಮ ಜನ ವಸತಿಗೆ ಅಷ್ಟಾಗಿ ಯೋಗ್ಯವೆನಿಸಿರಲಿಲ್ಲ. ಯಾವುದೇ ಕಲ್ಲು, ಬಂಡೆಯನ್ನೆತ್ತಿದರೂ ಅಲ್ಲಿ ಚೇಳುಗಳ ಅವಾಸ ಸ್ಥಾನವಾಗಿರುತ್ತಿತ್ತು. ಅಂತಹ ಗ್ರಾಮವು ಮೊದಲು ಚೇಳಗುರಿಕೆಯಾಗಿ, ನಂತರ ಚೇಳಗುರ್ಕಿಯಾಗಿ ಕ್ರಮೇಣ ಚೇಳ್ಳಗುರ್ಕಿ ಗ್ರಾಮವೆಂದು ಕರೆಯಲ್ಪಟ್ಟಿತ್ತು.
ವಿಶೇಷ ಎಂದ್ರೆ ಈಗ ಆ ಗ್ರಾಮದಲ್ಲಿ ಎರ್ರಿತಾತನವರ ಜಾತ್ರಾ ಮಹೋತ್ಸವದ ಸಂಭ್ರಮ. ನೆರೆಯ ಆಂಧ್ರಪ್ರದೇಶದ ಗಡಿಗೆ ಅಂಟಿಕೊಂಡಿರುವ ಬಳ್ಳಾರಿ ತಾಲೂಕಿನ ಚೇಳ್ಳಗುರ್ಕಿ ಗ್ರಾಮದಲ್ಲೀಗ ಜೀವ ಸಮಾಧಿ ಎರ್ರಿ ತಾತನವರ ಸನ್ನಿಧಿಯ ಜಾತ್ರಾ ಮಹೋತ್ಸವದ ಸಂಭ್ರಮವು ನಾಡಿನಾದ್ಯಂತ ಮಡುಗಟ್ಟಿದೆ. ಇಂದಿನಿಂದ ಮೂರು ದಿನಗಳಕಾಲ ಈ ದೇಗುಲದ ಸನ್ನಿದಿಯಲ್ಲಿ ಬಸವ ಉತ್ಸವ, ಮಹಾರಥೋತ್ಸವ ಹಾಗೂ ಹೂವಿನ ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳೂ ಅತ್ಯಂತ ವಿಜೃಂಭಣೆಯಿಂದ ನಡೆಯಲಿವೆ.
ಎರ್ರಿತಾತನವರ ಸನ್ನಿಧಾನದಲ್ಲಿ ನಡೆಯುವ ಧಾರ್ಮಿಕ ವಿಧಿವಿಧಾನದ ಆಚರಣೆಗೆ ರಾಜ್ಯವಲ್ಲದೆ, ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳ ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ.
ಓಂ ನಮಃ ಶಿವಾಯ ಮಂತ್ರದ ಜಪ
ಮಳೆಗಾಗಿ ಪ್ರಾರ್ಥಿಸಿ ಜೀವ ಸಮಾಧಿಯಾದ ಎರ್ರಿತಾತನವರ ಸನ್ನಿಧಿಯಲ್ಲಿ ಕಳೆದ ಏಳು ದಿನಗಳ ಕಾಲ ಸಪ್ತ ಭಜನೋತ್ಸವವನ್ನು ಆಯೋಜಿಸಲಾಗಿದ್ದು, ಭಕ್ತರು ಓಂ ನಮಃ ಶಿವಾಯದ ಗಾಯನೋತ್ಸವದಲ್ಲಿ ಭಾಗವಹಿಸಿದ್ದಾರೆ. ಜೂನ್ 1 ರಿಂದ 8ರ ವರೆಗೆ ಈ ಸಪ್ತ ಭಜನೋತ್ಸವ ನಡೆಯಲಿದೆ. ಒಂದೊಂದು ದಿನ ನಿಗದಿತ ಗ್ರಾಮಗಳು, ಯುವಜನರ ತಂಡ ಓಂ ನಮಃ ಶಿವಾಯದ ಗಾಯನೋತ್ಸವಕ್ಕೆ ನೃತ್ಯದ ಮೂಲಕ ಹೆಜ್ಜೆ ಹಾಕ್ತಾರೆ.
ಬಳ್ಳಾರಿ ತಾಲೂಕಿನ ಚೇಳ್ಳಗುರ್ಕಿ, ತೆಗ್ಗಿನಬೂದಿಹಾಳು, ಜಾಲಿಬೆಂಚಿ, ಮೆದೆಹಾಳು, ಶಿಡಗಿನಮೊಳೆ, ಮಸೂದಿಪುರ, ವಣೇನೂರು, ಡೊಣೇಕಲ್ಲು, ಜೋಳದರಾಶಿ, ಸಿರಗಾಪುರ, ಕಾರೇಕಲ್ಲು, ಕಪ್ಪಗಲ್ಲು, ಕಲ್ಲುಕಂಭ, ಶಂಕರಬಂಡೆ, ಅಮರಾ ಪುರ, ಏಳುಬೆಂಚೆ, ಗುಡದೂರು, ಜಾಲಿಹಾಳು, ಕೊಕ್ಕರಚೇಡು, ಎರ್ರಿಸ್ವಾಮಿ ರಾಂಪುರ, ವೈ. ಕಗ್ಗಲ್, ಮುಷ್ಟಗಟ್ಟೆ, ಕೆ.ವೀರಾಪುರ, ಕುಂಟನಹಾಳು, ಶಾನವಾಸಪುರ, ಜಾಕಬಂಡೆ, ಕರ್ಚೇಡು ಗ್ರಾಮಗಳ ಭಕ್ತರು ಈ ಸಪ್ತ ಭಜನೆಯಲ್ಲಿ ಮಿಂದೇಳಲಿದ್ದಾರೆ.
ವಿಶ್ವದಲ್ಲಿ ಶಾಂತಿ ನೆಲೆಸಿ, ಸಕಾಲದಲ್ಲಿ ವರುಣ ದೇವನ ಕರುಣೆ ನಮ್ಮೆಲ್ಲರ ಮೇಲೆ ಸದಾ ಇರಬೇಕೆಂದು ಸತತ ಅರವತ್ತೊಂದು ವರ್ಷಗಳ ಕಾಲ ಸಪ್ತಭಜನೆಯನ್ನು ಜೀವ ಸಮಾಧಿ ಎರ್ರಿತಾತ ನವರ ಸನ್ನಿಧಾನದಲ್ಲಿ ಮಾಡುತ್ತಾ ಬಂದಿದ್ದೇವೆ. ಈ ವರ್ಷವೂ ಕೂಡ ಸಪ್ತಭಜನೆ ಮುಂದುವರಿದಿದೆ. ಸಪ್ತಭಜನೆ ಗಾಯನೋತ್ಸವದಲ್ಲಿ ಸರ್ಪದ ಭಂಗಿ ಸೇರಿದಂತೆ ಇನ್ನಿತರೆ ನೃತ್ಯ ಪ್ರದರ್ಶನ ಮಾಡುತ್ತಲೇ ಆನಂದಿಸುತ್ತೇವೆ ಎಂದು ಶಂಕರಬಂಡೆ ಗ್ರಾಮದ ಭಕ್ತರಾದ ಪಂಪನಗೌಡ ಹಾಗೂ ತಿಮ್ಮನಗೌಡ ಹೇಳುತ್ತಾರೆ.
ಎರ್ರಿತಾತನವರ ಮಹಿಮೆ ದೊಡ್ಡದು:
ಜೀವ ಸಮಾಧಿ ಎರ್ರಿತಾತನವರ ಸನ್ನಿಧಿಯು ಈ ಕುಗ್ರಾಮದಲ್ಲಿರೋದೆ ನಮ್ಮೆಲ್ಲರ ಸೌಭಾಗ್ಯ. ಆತನ ಮಹಿಮೆ ಬಹಳ ದೊಡ್ಡದು. ಮದ್ರಾಸ್, ನೆರೆಯ ಆಂಧ್ರಪ್ರದೇಶ ಹಾಗೂ ಕರ್ನಾಟಕದ ನಾನಾ ಜಿಲ್ಲೆಗಳಿಂದ ಸಾವಿರಾರು ಭಕ್ತರು ಸನ್ನಿಧಿಗೆ ಆಗಮಿಸುತ್ತಾರೆ. ಅವರೆಲ್ಲರ ಕಷ್ಟಕಾರ್ಪಣ್ಯಗಳಿಗೆ ಎರ್ರಿತಾತ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ ಎಂದು ಎರ್ರಿಸ್ವಾಮಿ ಜೀವಸಮಾಧಿ ಟ್ರಸ್ಟ್ನ ಅಧ್ಯಕ್ಷ ಬಾಳನ ಗೌಡರು ತಿಳಿಸಿದ್ದಾರೆ.