ಬಳ್ಳಾರಿ : ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾಡು-ಮೇಡು, ಗುಡ್ಡಬೆಟ್ಟ ಪ್ರದೇಶಗಳಲ್ಲಿ ಜೀವದ ಹಂಗು ತೊರೆದು ಅರಣ್ಯ ಮತ್ತು ವನ್ಯಜೀವಿಗಳ ಸಂಪತ್ತಿನ ಉಳುವಿಗಾಗಿ ಶ್ರಮವಹಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಹೇಳಿದರು.
ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆಯ ಸಿಬ್ಬಂದಿ ವಿವಿಧ ರೀತಿಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇವರುಗಳಿಗೆ ಎಲ್ಲರೂ ಒತ್ತಾಸೆಯಾಗಿ ನಿಂತು ಧೈರ್ಯ ಮತ್ತು ಸಹಕಾರ ನೀಡಬೇಕು ಎಂದರು.
![Cooperation is essential for forest department personnel saving wildlife wealth DC Nakul said](https://etvbharatimages.akamaized.net/etvbharat/prod-images/kn-05-bly-110920-forest-depertment-news-ka10007_11092020181030_1109f_1599828030_535.jpg)
ಜಿಲ್ಲಾ ಪ್ರಧಾನ ಮತ್ತು ಸತ್ರನ್ಯಾಯಾಧೀಶರಾದ ಕೃಷ್ಣ ಬಿ.ಅಸೋಡೆ ಮಾತನಾಡಿ, ದುರ್ಗಮ ಅರಣ್ಯ ಪ್ರದೇಶಗಳಲ್ಲಿ ತಮ್ಮ ಜೀವದ ಹಂಗು ತೊರೆದು ಅರಣ್ಯಾಧಿಕಾರಿಗಳು, ಸಿಬ್ಬಂದಿ ಕಾರ್ಯ ನಿರ್ವಹಿಸುವುದನ್ನು ನಾನು ಕಂಡಿದ್ದೇನೆ. ಹೆಗ್ಗಡದೇವನ ಕೋಟೆ ಅರಣ್ಯ ಭಾಗದಲ್ಲಿ ನಾನು ಸಂಚರಿಸಿದ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿಯ ಉತ್ತಮ ಕಾರ್ಯವೈಖರಿ ನೋಡಿದ್ದೇನೆ. ಸದ್ಯ ಅರಣ್ಯಾಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಹೆಚ್ಚಿನ ಪ್ರೋತ್ಸಾಹದ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್ ಎಸ್ ಲಿಂಗರಾಜು ಅವರು, ಅರಣ್ಯ ಇಲಾಖೆ ಸಿಬ್ಬಂದಿಯ ಮಕ್ಕಳು ಶೈಕ್ಷಣಿಕ ಸೌಲಭ್ಯವಿಲ್ಲದೆ ವಂಚಿತರಾಗುತ್ತಿದ್ದಾರೆ. ಅಲ್ಲದೆ ಆಧುನಿಕ ಮಾದರಿಯ ಶಸ್ತ್ರಾಸ್ತ್ರ ಇಲ್ಲದೆ ತಮ್ಮನ್ನು ತಾವು ಹಾಗೂ ವನ್ಯಜೀವಿ ಸಂಪತ್ತುನ್ನು ರಕ್ಷಣೆ ಮಾಡುವುದು ತುಂಬ ಕಷ್ಟಕರವಾಗಿದೆ. ಅವರ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಮತ್ತು ಆಧುನಿಕ ಶಸ್ತ್ರಾಸ್ತ ಪೂರೈಕೆ ಅವಶ್ಯಕ ಎಂದರು. ಕಾರ್ಯಕ್ರಮದಲ್ಲಿ ಕಳೆದ 54 ವರ್ಷಗಳಲ್ಲಿ ಕರ್ತವ್ಯ ಸಮಯದಲ್ಲಿ ಹುತಾತ್ಮರಾದ 50 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸ್ಮರಿಸಲಾಯಿತು.