ಬಳ್ಳಾರಿ: ಕೊರೊನಾ ವೈರಸ್ ಎಲ್ಲ ಉದ್ಯಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕೊರೊನಾದಿಂದಾಗಿ ಹಣ ಹಾಗೂ ಕೆಲಸವಿಲ್ಲದೆ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಪ್ರತಿ ವರ್ಷ ಬಕ್ರೀದ್ ಹಬ್ಬ ಬಂತೆಂದರೆ ಕುರಿಗಳಿಗೆ ಭಾರೀ ಬೇಡಿಕೆ ಇರುತ್ತಿತ್ತು. ಆದರೆ, ಈ ವರ್ಷ ಮಾತ್ರ ಕುರಿಗಳ ಬೇಡಿಕೆ ಸಂಪೂರ್ಣ ಕುಸಿದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನಗರದ ರೇಡಿಯೋ ಪಾರ್ಕ್ ಪ್ರದೇಶದ ಕುರಿ ಮಾರಾಟಗಾರ ಮೌಸಿಮ್ ಖಾನ್, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕುರಿ ಖರೀದಿಸುವವರ ಸಂಖ್ಯೆ ಗಣನೀಯವಾಗಿ ಇಳಿದಿದೆ. ಬಂದರೂ ಸಹ ಕುರಿಗಳ ಬೆಲೆ ಕೇಳಿ ವಾಪಸ್ ಹೋಗುತ್ತಾರೆ. ಹಿಂದಿನ ವರ್ಷದ ಬಕ್ರೀದ್ಗೆ ಹೋಲಿಕೆ ಮಾಡಿದರೆ ಒಂದು ಕುರಿಗೆ ಕನಿಷ್ಠ 8 ಸಾವಿರ ರೂಪಾಯಿ ನಷ್ಟವಾಗಿದೆ. ಕಳೆದ ಮೂರು ವರ್ಷಗಳಿಂದ ಕುರಿಗಳನ್ನು ಸಾಕಿ ಮಾರಾಟ ಮಾಡುವ ಕೆಲಸ ಮಾಡುತ್ತಾ ಇದ್ದೇನೆ. ಆದರೆ, ಈ ವರ್ಷ ಕೊರೊನಾ ವೈರಸ್ ಇರುವುದರಿಂದ ಜನರು ಕುರಿ ಖರೀದಿ ಮಾಡಲು ಬರುತ್ತಿಲ್ಲ.
ಒಂದು ವರ್ಷದ ಕುರಿ ಮರಿಗೆ 8 ಸಾವಿರದಿಂದ 25 ಸಾವಿರದವರೆಗೆ ಮಾರಾಟ ಮಾಡಲಾಗುತ್ತದೆ. ಎರಡು ವರ್ಷದ ಕುರಿಗೆ 27 ಸಾವಿರದಿಂದ 38 ಸಾವಿರ ರೂಪಾಯಿವರೆಗೆ ಮಾರಾಟ ಮಾಡಿದ್ದೇವೆ. ಆದರೆ, ಈ ವರ್ಷದ ಬಕ್ರೀದ್ ಹಬ್ಬಕ್ಕೆ 8 ಸಾವಿರ ರೂಪಾಯಿ ಕಡಿಮೆ ಬೆಲೆಗೆ ಕುರಿಗಳ ಮಾರಾಟ ಮಾಡಿದರೂ ಜನರು ಖರೀಸಲು ಮಂದೆ ಬರುತ್ತಿಲ್ಲ ಎಂದರು.