ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ಪಟ್ಟಣ ಹೊರವಲಯದ ಮದಲಗಟ್ಟಿ ರಸ್ತೆಯಲ್ಲಿ ಬುಲೆರೋ ಕಾರೊಂದು ರಸ್ತೆ ವಿಭಜಕ ಮತ್ತು ಟಾಟಾ ಏಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ನವವಧು ಸೇರಿದಂತೆ 15 ಮಂದಿ ಗಾಯಗೊಂಡ ಘಟನೆ ನಡೆದಿದೆ.
ಅಪಘಾತದಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕೆ ಗ್ರಾಮದ ನವವಧು ವಿದ್ಯಾ (19), ಶಿವಕ್ಕ (30), ಬಸವ್ವ (40) ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡವರನ್ನು ನೆರೆಯ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಹೊಸದಾಗಿ ಮದುವೆಯಾದ ಬೆಳವಣಿಕೆ ಗ್ರಾಮದ ನವ ಜೋಡಿ, ಬಂಧುಗಳೊಂದಿಗೆ ಬುಲೆರೋ ಕಾರಿನಲ್ಲಿ ದೇವರಗುಡ್ಡದ ಸುಕ್ಷೇತ್ರ ದರ್ಶನಕ್ಕೆ ತೆರಳಿದ್ದರು. ಗ್ರಾಮಕ್ಕೆ ವಾಪಾಸ್ ಆಗುವ ವೇಳೆ ಈ ಅಪಘಾತ ಸಂಭವಿಸಿದೆ. ಅತೀ ವೇಗದಲ್ಲಿದ್ದ ಬುಲೆರೋ ಕಾರು ಎಮ್ಮೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆ ವಿಭಜಕಕ್ಕೆ ಅಪ್ಪಳಿಸಿದೆ. ನಂತರ ಟಾಟಾ ಏಸ್‌ಗೆ ಡಿಕ್ಕಿ ಹೊಡೆದಿದೆ.
ಇನ್ನು ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು ನೆರವಾದರು. ಘಟನಾ ಸ್ಥಳಕ್ಕೆ ಹಡಗಲಿಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.