ಬಳ್ಳಾರಿ: ರಾಜ್ಯದ ಕೊರೊನಾ ಸೋಂಕಿತರಿಗೆ ಪೂರೈಕೆಯಾಗುವ ರೆಮ್ಡೆಸಿವಿರ್ ಇಂಜೆಕ್ಷನ್ ಅನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಜಾಲವೊಂದು ಗಣಿನಗರಿ ಬಳ್ಳಾರಿಯಲ್ಲಿ ಪತ್ತೆಯಾಗಿರುವುದಕ್ಕೆ ಎಲ್ಲೆಡೆ ಭಾರೀ ವಿರೋಧ ವ್ಯಕ್ತವಾಗಿದೆ.
ಇಂಥಹ ಗತಿ ನಮ್ಮ ಜಿಲ್ಲೆಗೆ ಬರಬಾರದಿತ್ತು, ಇದರಿಂದಾಗಿ ನಮ್ಮ ಜಿಲ್ಲೆಗೆ ಕೆಟ್ಟ ಹೆಸರು ಬಂದಿದೆ. ಈ ಜಾಲದ ಹಿಂದೆ ಎಷ್ಟೇ ಪ್ರಭಾವಿಗಳ ಕೈವಾಡವಿದ್ದರೂ ಕೂಡ ಬಿಡದೇ, ಜಿಲ್ಲೆಯ ಪೊಲೀಸರು ತನಿಖೆ ಮುಂದುವರಿಸಿ ಕಠಿಣ ಶಿಕ್ಷೆಯನ್ನ ವಿಧಿಸಬೇಕೆಂಬ ಗಟ್ಟಿಯಾದ ಕೂಗನ್ನ ಜಿಲ್ಲೆಯ ಜನಪ್ರತಿನಿಧಿಗಳು ಸೇರಿ ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ರೆಮ್ಡೆಸಿವಿರ್ ಇಂಜೆಕ್ಷನ್ ಅನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪದ ಅಡಿ, ಜಿಲ್ಲೆಯ ಪೊಲೀಸರು ಈಗಾಗಲೇ ಬಳ್ಳಾರಿಯ ರಾಘವೇಂದ್ರ ಕಾಲೊನಿ ನಿವಾಸಿಯಾದ ಕಿಶೋರಕುಮಾರ್ ಎಂಬಾತನನ್ನ ಬಂಧಿಸಲಾಗಿದೆ. ಆತನ ಹಿಂದೆ ಬಹುದೊಡ್ಡ ಜಾಲವೊಂದಿದ್ದು, ಪ್ರಭಾವಿ ಸಚಿವರು, ಶಾಸಕರೂ ಕೂಡ ಇದ್ದಾರೆಂಬ ಶಂಕೆಯೂ ವ್ಯಕ್ತವಾಗಿದೆ.
ಮಾಧ್ಯಮಗಳ ಮುಂದೆ ಹೇಳೋಕೆ ಆಗೋಲ್ಲ ಎಂದ ಸಚಿವ ಆನಂದಸಿಂಗ್:
ರೆಮ್ಡೆಸಿವಿರ್ ಕಾಳಸಂತೆಯಲ್ಲಿ ಮಾರಾಟ ಜಾಲ ಪತ್ತೆಯ ಕುರಿತು ಪೊಲೀಸ್ ತನಿಖೆಯಲ್ಲಿದ್ದು, ಅದನ್ನೆಲ್ಲಾ ಮಾಧ್ಯಮಗಳ ಮುಂದೆ ಹೇಳೋಕೆ ಆಗೋಲ್ಲ. ಸೂಕ್ತ ತನಿಖೆಯಾಗಲಿ,
ಆ ಮೇಲೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದರು. ಆದರೂ ಈ ರೆಮ್ಡೆಸಿವಿರ್ ಇಂಜೆಕ್ಷನ್ ನಿಂದಲೇ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗುತ್ತಾರೆ ಅಂತ ಹೇಳೋಕೆ ಆಗೋಲ್ಲ. ಎಲ್ಲ ವೈದ್ಯ ಕೀಯ ಔಷಧಿಯಂತೆ ಅದೂ ಕೂಡ ಒಂದು. ಅದನ್ನೇ ದೊಡ್ಡದ್ದು ಮಾಡೋದು ಸರಿಯಲ್ಲ. ರೆಮ್ಡೆಸಿವಿರ್ ಅನ್ನು ಸಮರ್ಪಕವಾಗಿ ಪೂರೈಕೆ ಮಾಡುವಂತೆ ಕೋರಿ ಸಿಪ್ಲಾ ಕಂಪನಿಯೊಂದಿಗೆ ಮಾತನಾಡಿದ್ದೇವೆ. ಅಲ್ಲಿಂದ ಇಡೀ ರಾಜ್ಯಕ್ಕೆ ಪೂರೈಕೆಯಾಗುವ ಹಿನ್ನೆಲೆಯಲ್ಲಿ ನಮ್ಮ ಜಿಲ್ಲೆಗೆ ಅದೆಷ್ಟು? ರೆಮ್ಡೆಸಿವಿರ್ ಇಂಜೆಕ್ಷನ್ ಡೋಸ್ ಸಿಗುತ್ತೆ ಅಂತ ಗೊತ್ತಿಲ್ಲ ಎಂದರು.
ನಮ್ಮ ಜಿಲ್ಲೆಗೆ ಇಂತಹ ಗತಿ ಬರಬಾರದಿತ್ತು:
ರೆಮ್ಡೆಸಿವಿರ್ ಇಂಜೆಕ್ಷನ್ ಕಾಳಸಂತೆಯಲಿ ಮಾರಾಟ ಮಾಡುವಂತಹ ಗತಿ ನಮ್ಮ ಜಿಲ್ಲೆಗೆ ಎದುರಾಗಬಾರದಿತ್ತು. ಈ ಜಾಲದಲ್ಲಿ ಭಾಗಿಯಾದವರು ಎಷ್ಟೇ ಪ್ರಭಾವಿಗಳಾದರೂ ಬಿಡಬಾರದು. ಅವರನ್ನ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಆಗ್ರಹಿಸಿದ್ದಾರೆ.
ಯಾರ ಪ್ರಭಾವಕ್ಕೆ ಒಳಗಾಗಬಾರದು:
ರೆಮ್ಡೆಸಿವಿರ್ ಕಾಳಸಂತೆಯಲಿ ಮಾರಾಟ ಮಾಡೋ ಜಾಲದ ಹಿಂದೆ ಪ್ರಭಾವಿಗಳ ಕರಿನೆರಳು ಇದೆಯೆಂದು ತಿಳಿದು ಬಂದಿದೆ. ಅದರ ಹಿಂದೆ ಯಾರೇ ಇದ್ದರೂ ಅವರ ಪ್ರಭಾವಕ್ಕೆ ಒಳಗಾಗದೇ ನಿರ್ದಾಕ್ಷಿಣ್ಯವಾಗಿ ತನಿಖೆ ನಡೆಸಬೇಕೆಂದು ಗಣಿ ಅಕ್ರಮದ ಹೋರಾಟಗಾರ ಟಪಾಲ್ ಗಣೇಶ ಒತ್ತಾಯಿಸಿದ್ದಾರೆ.