ಬಳ್ಳಾರಿ: ಕಳೆದ ಎರಡು ವರ್ಷಗಳ ಹಿಂದೆಯೇ ನಡೆಯಬೇಕಿದ್ದ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಇದೀಗ ಘೋಷಣೆಯಾಗಿದ್ದು, ಮಹಾ ನಗರದ 39 ವಾರ್ಡ್ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರ ರಾಜಕೀಯ ಚಟುವಟಿಕೆಗಳು ಗರಿ ಗೆದರಿವೆ.
ಮಹಾನಗರ ಪಾಲಿಕೆಯ ಐದು ವರ್ಷಗಳ ಅವಧಿ ಪೂರ್ಣಗೊಂಡು ಎರಡು ವರ್ಷಗಳು ಕಳೆದಿತ್ತು. ಇದೀಗ ಏಪ್ರಿಲ್ 27 ರಂದು ಚುನಾವಣೆ ನಡೆಯಲಿದ್ದು, ಏಪ್ರಿಲ್ 30 ರಂದು ಫಲಿತಾಂಶ ಪ್ರಕಟವಾಗಲಿದೆ.
ಇನ್ನು ಇಂದಿನಿಂದ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಮಹಾನಗರ ಪಾಲಿಕೆ ಚುನಾವಣಾ ನಿಮಿತ್ತ ವಾರ್ಡ್ವಾರು ಪ್ರಚಾರ ಶುರು ಮಾಡಿದ್ರೆ, ಇತ್ತ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಎಂಎಲ್ಸಿ ಕೆ.ಸಿ.ಕೊಂಡಯ್ಯ ಮನೆಯಲ್ಲೂ ಸಹ ರಾಜಕೀಯ ಚಟುವಟಿಕೆಗಳು ಮುಂದುವರೆದಿದೆ.
ಉಭಯ ರಾಜಕೀಯ ಪಕ್ಷಗಳು ಆಯಾ ವಾರ್ಡ್ವಾರು ಮೀಸಲಾತಿಗೆ ಅನುಗುಣವಾಗಿ ಗೆಲ್ಲುವ ಹಾಗೂ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿಗಳನ್ನ ಹುಡುಕಾಟ ನಡೆಸಿದ್ದಲ್ಲದೇ, ಸಾಮಾಜಿಕ ನ್ಯಾಯದ ಅಡಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲು ಕಾಂಗ್ರೆಸ್ ಮುಂದಾಗಿರೋದು ಕೂಡಾ ಚರ್ಚಾ ವಿಷಯವಾಗಿದೆ.
ಕೆಸಿಕೆ ಮನೆಗೆ ಟಿಕೆಟ್ ಆಕಾಂಕ್ಷಿಗಳು ದೌಡು: ಇಲ್ಲಿನ ವೈ.ನಾಗೇಶ ಶಾಸ್ತ್ರಿ ನಗರದಲ್ಲಿರುವ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ನಿವಾಸದ ಮುಂದೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿರುವ ಟಿಕೆಟ್ ಆಕಾಂಕ್ಷಿಗಳು ಸೇರಿದಂತೆ ಜಿಲ್ಲಾ ಪಂಚಾಯತ್ ಸದಸ್ಯರು, ಹಿರಿಯ ಕಾರ್ಯಕರ್ತರು, ಮುಖಂಡರು ಭೇಟಿ ನೀಡಿ ಟಿಕೆಟ್ ನೀಡುವಂತೆ ಮನವೊಲಿಸುತ್ತಿದ್ದಾರೆ.
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತಾಡಿದ ಕೆ.ಸಿ.ಕೊಂಡಯ್ಯ, ಕಾಂಗ್ರೆಸ್ ಶಿಸ್ತಿನ ಪಕ್ಷ. ಹೀಗಾಗಿ, ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಈಗಾಗಲೇ ಡಿಸಿಸಿ ಅಧ್ಯಕ್ಷರಿಗೆ ಸೂಚನೆ ನೀಡಲಾಗಿದೆ. ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಏಪ್ರಿಲ್ 8 ರವರೆಗೆ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಡಿಸಿಸಿ ಕಚೇರಿಯಲ್ಲಿ ಸ್ವೀಕೃತಿಯಾದಂತಹ ಅರ್ಜಿಗಳನ್ನ ಕೆಪಿಸಿಸಿ ಕಚೇರಿಗೆ ಕಳುಹಿಸಿಕೊಡಲಾಗಿದೆ. ಅಲ್ಲಿಂದ ಹೈಕಮಾಂಡ್ ನತ್ತ ತೆರಳಿ, ಅಂತಿಮ ಆಕಾಂಕ್ಷಿಗಳ ಪಟ್ಟಿ ಹೊರಬರಲಿದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆ ನಡೆಯಲಿದೆ ಎಂದರು.
ಇನ್ನು ಹಿಂದಿನ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಪಕ್ಷ ಅತ್ಯುತ್ತಮ ಕೆಲಸ ಮಾಡಿದೆ. ಹಾಗಾಗಿ ಈ ಬಾರಿಯ ಮಹಾನಗರ ಪಾಲಿಕೆಯ ಆಡಳಿತ ಚುಕ್ಕಾಣಿಯನ್ನು ಕಾಂಗ್ರೆಸ್ ಪಕ್ಷ ಹಿಡಿಯಲಿದೆ ಎಂಬ ವಿಶ್ವಾಸ ನನಗಿದೆ ಎಂದರು.