ಬಳ್ಳಾರಿ: ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಿಂದ ಕಬ್ಬಿಣದ ಅದಿರನ್ನು ವಿದೇಶಕ್ಕೆ ರಫ್ತು ಮಾಡಲು 11 ವರ್ಷಗಳ ಕಾನೂನು ಹೋರಾಟದ ಬಳಿಕ ನಿಷೇಧವನ್ನು ಸುಪ್ರೀಂಕೋರ್ಟ್ ಹಿಂತೆಗೆದುಕೊಂಡಿದೆ. ಈ ಬೆನ್ನಲ್ಲೇ ಬಳ್ಳಾರಿ ಗಣಿವಲಯದಲ್ಲಿ ಚಟುವಟಿಕೆ ಬಿರುಸುಗೊಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಬ್ಬಿಣದ ದರ ಶೇ.50ರಷ್ಟು ಹೆಚ್ಚಳವಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಕೂಡ ಅದಿರಿಗೆ ಈಗ ಬಂಗಾರದ ಬೆಲೆ ಇದೆ.
ಹೀಗಾಗಿ ಸಂಡೂರಿನ ಅದಿರು ಬಳಸಿ ಪೈಲಟ್ ಪ್ಲ್ಯಾಂಟ್ ಸ್ಥಾಪನೆಗೆ ಬಿಕೆಜಿ ಗಣಿ ಕಂಪನಿ ಮುಂದಾಗಿದೆ. ಸಂಡೂರಿನ ಸೋಮಲಾಪುರ, ಅಂಕಮನಾಳ ಗ್ರಾಮದ ಬಳಿಯ 260 ಎಕರೆ ಪ್ರದೇಶದಲ್ಲಿ ಬಿಕೆಜಿ ಗಣಿ ಕಂಪನಿ ಸ್ಪಾಂಜ್ ಐರನ್ ಓರ್ ಫ್ಯಾಕ್ಟರಿ ಸ್ಪಾಪನೆ ಮಾಡಲು ಮುಂದಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕೃಷಿ ಜಮೀನುಗಳ ಪಕ್ಕದಲ್ಲೇ ಸಾವಿರಾರು ಎಕರೆ ಅರಣ್ಯ ಪ್ರದೇಶವಿದೆ. ಆ ದಟ್ಟ ಅರಣ್ಯ ಪ್ರದೇಶದಲ್ಲಿ ಅಪರೂಪದ ಔಷಧಿ ಸಸ್ಯಗಳ ವನವಿದೆ. ಅಂತಹ ಫಲವತ್ತಾದ ಪ್ರದೇಶದಲ್ಲೀಗ ಮೈನಿಂಗ್ ಸ್ಪಾಂಜ್ ಫ್ಯಾಕ್ಟರಿ ಪ್ರಾರಂಭವಾದರೆ ಮಾನವ ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ. ಅಷ್ಟೇ ಅಲ್ಲ, ಅರಣ್ಯ ಪ್ರದೇಶಕ್ಕೆ ಭಾರಿ ಪ್ರಮಾಣದ ಧಕ್ಕೆಯಾಗಲಿದೆ ಎಂಬುದು ರೈತರ ವಾದ.
ಇದನ್ನೇ ರೈತರು ಪರಿಸರ ಆಲಿಕೆ ಸಭೆಯಲ್ಲಿ ಪ್ರತಿಪಾದಿಸಿದ್ದಾರೆ. ಆದರೆ, ಪರಿಸರ ಆಲಿಕೆ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು, ರೈತರು ಹಾಗೂ ಹೋರಾಟಗಾರರ ವಿರುದ್ಧ ಫ್ಯಾಕ್ಟರಿ ಪರವಾಗಿ ಇರುವ ಕೆಲವರು ಸುಳ್ಳು ಕೇಸ್ ದಾಖಲಿಸುತ್ತಿದ್ದಾರೆ. ಅಲ್ಲದೇ ಫ್ಯಾಕ್ಟರಿಯವರ ಪರವಾಗಿ ಪೊಲೀಸರು ಕೂಡ ಇದ್ದು, ಹೋರಾಟಗಾರರನ್ನ ಹತ್ತಿಕ್ಕುವ ಯತ್ನ ಮಾಡುತ್ತಿದ್ದಾರೆಂದು ರೈತರು ಆರೋಪಿದ್ದಾರೆ.
ಅಲ್ಲದೇ, ಸಂಡೂರಿನ ಬಿಕೆಜಿ ಗಣಿ ಕಂಪನಿ ಸ್ಥಾಪಿಸುತ್ತಿರುವ ಸ್ಪಾಂಜ್ ಐರನ್ ಓರ್ ಕಂಪನಿ ವಿರುದ್ಧ ರೈತರ ಹೋರಾಟ ಹತ್ತಿಕ್ಕಲು ಸಂಡೂರು ಪೊಲೀಸರು ಸುಳ್ಳು ಕೇಸ್ ದಾಖಲಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಪೊಲೀಸರ ವಿರುದ್ಧ ರೊಚ್ಚಿಗೆದ್ದಿರುವ ನೂರಾರು ಗ್ರಾಮಸ್ಥರು ಮತ್ತು ರೈತರು ಬಳ್ಳಾರಿಯಲ್ಲಿನ ಎಸ್ಪಿ ಕಚೇರಿಗೆ ಬಂದು ಸಂಡೂರು ಪೊಲೀಸರ ವಿರುದ್ಧವೇ ದೂರು ನೀಡಿದ್ದಾರೆ. ಗ್ರಾಮಸ್ಥರ ಮನವಿ ಆಲಿಸಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುರುನಾಥ ಸುಳ್ಳು ಕೇಸ್ ದಾಖಲಿಸಿದರೆ, ಪಿಎಸ್ಐ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.