ಬಳ್ಳಾರಿ: ಲಾಕ್ಡೌನ್ ಸಡಿಲಿಕೆ ಮಾಡಿ ಈಗಾಗಲೇ ಎರಡ್ಮೂರು ತಿಂಗಳಾದರೂ ಕೂಡ ಗಣಿ ಜಿಲ್ಲೆಯ ಖಾಸಗಿ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುವವರ ಸಂಖ್ಯೆ ಬಹಳಷ್ಟು ಕ್ಷೀಣಿಸಿದೆ.
ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳ ಕೊನೆಯವರೆಗೂ ಪ್ರವೇಶಾತಿ ಪಡೆಯುವ ಅವಕಾಶ ಕಲ್ಪಿಸಿ ಖಾಸಗಿ ಕಾಲೇಜುಗಳು ಬಾಗಿಲು ತೆರೆದು ಕಾಯುತ್ತಾ ಕುಳಿತರೂ ಕೂಡ ಪ್ರತಿದಿನ ನಾಲ್ಕಾರು ಮಂದಿ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳತ್ತ ಎಡತಾಕುತ್ತಾರಷ್ಟೇ. ಕಳೆದ ಸಾಲಿನಲ್ಲಿ ಇಷ್ಟೊತ್ತಿಗಾಗಲೇ ಖಾಸಗಿ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆದ ನೂರಾರು ವಿದ್ಯಾರ್ಥಿಗಳಿಗೆ ತರಗತಿಗಳೂ ಆರಂಭವಾಗಿದ್ದವು.
ಪ್ರತೀ ಬಾರಿಯೂ ಕೂಡ ನೂರಾರು ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುತ್ತಿದ್ದರು. ಆದರೀಗ ವಿದ್ಯಾರ್ಥಿಗಳ ಸಂಖ್ಯೆ ಕೇವಲ ಹತ್ತಾರು ಮಂದಿಗೆ ಕ್ಷೀಣಿಸಿದೆ. ಈವರೆಗೂ ವೀರಶೈವ ಕಾಲೇಜಿನಲ್ಲಿ ಕೇವಲ 30 ಮಂದಿ ವಿದ್ಯಾರ್ಥಿಗಳು ಮಾತ್ರ ಪ್ರವೇಶಾತಿ ಪಡೆದಿದ್ದಾರೆ.
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ವೀರಶೈವ ಕಾಲೇಜಿನ ಪ್ರಾಚಾರ್ಯ ಪ್ರೊ. ಜಿ.ರಾಜಶೇಖರ, ಕಳೆದ ಶೈಕ್ಷಣಿಕ ಸಾಲಿಗೆ ಹೋಲಿಸಿದರೆ ಈ ಬಾರಿ ಅದರ ಮುಕ್ಕಾಲು ಭಾಗದಷ್ಟು ಕೂಡ ಪ್ರವೇಶಾತಿ ಪಡೆದಿಲ್ಲ. ಆಗಸ್ಟ್ ತಿಂಗಳ ಕೊನೆಯವರೆಗೆ ಪ್ರವೇಶಾತಿಗೆ ಅವಕಾಶ ಕಲ್ಪಿಸಿದ್ದು, ಕಾದು ನೋಡಬೇಕಿದೆ ಎಂದರು.
ನೆರೆಯ ಆಂಧ್ರ ಪ್ರದೇಶದ ಗಡಿ ಭಾಗದ ಹಳ್ಳಿಗಳು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಿಂದಲೂ ಕೂಡ ಪ್ರವೇಶಾತಿ ಪಡೆಯುತ್ತಿದ್ದರು. ಕೋವಿಡ್ -19 ಸೋಂಕಿನ ಕುರಿತು ಭಯ ಇರುವ ಕಾರಣಕ್ಕೆ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಲು ಕಾಲೇಜುಗಳತ್ತ ಮುಖ ಮಾಡುತ್ತಿಲ್ಲ.
ಪ್ರವೇಶಾತಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಆನ್ಲೈನ್ ಮೂಲಕ ಬೋಧನೆ ಮಾಡಲಾಗುತ್ತೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಾಗಿ ಬರೋದರಿಂದಲೇ ಕೆಲವರ ಬಳಿ ಮೊಬಲ್ ಇರಲ್ಲ. ಮೊಬೈಲ್ ಇರುವ ಸ್ನೇಹಿತರ ಬಳಿ ಹೋಗಿ ಕ್ಲಾಸ್ ಕೇಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎನ್ನುತ್ತಾರೆ ಪ್ರೊ. ರಾಜಶೇಖರ.