ಬಳ್ಳಾರಿ: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ದಮ್ಮೂರು ಶೇಖರ್ ಅವರನ್ನು ಮರು ನೇಮಕ ಮಾಡಿರುವುದಕ್ಕೆ ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯ ಎಸ್ ಪಿ ವೃತ್ತದ ಬಳಿಯ ಬಿಜೆಪಿ ಕಚೇರಿಯಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಚನ್ನಬಸವನಗೌಡ ಪಾಟೀಲ ಅವರು, ಕೇವಲ ಒಂದೇ ದಿನದಲ್ಲೇ ಬುಡಾ ಅಧ್ಯಕ್ಷರನ್ನಾಗಿ ದಮ್ಮೂರು ಶೇಖರ್ ಅವರನ್ನು ಮರು ನೇಮಕಾತಿ ಮಾಡಿರುವ ಕುರಿತ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪಗೆ ತಿಳಿಸಲಾಗಿದೆ. ಕಳೆದ ಎರಡ್ಮೂರು ದಿನಗಳಿಂದ ಜಿಲ್ಲಾ ಬಿಜೆಪಿ ಘಟಕದಲ್ಲಿ ನಡೆದ ಬೆಳವಣಿಗೆಗಳು ನನಗಂತೂ ಬೇಸರ ಮೂಡಿಸಿದೆ ಎಂದರು.
ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿ ನೀಡಬೇಕೆಂದು ಈ ಮೊದಲೇ ನಾನು ತಿಳಿಸಿದ್ದೆ. ಅದಾಗ್ಯೂ ಕೂಡ ನಿಷ್ಠಾವಂತ ಕಾರ್ಯಕರ್ತರಲ್ಲದವರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿ ನೀಡಲಾಗಿದೆ. ಈ ಹಿಂದೆಯೂ ಕೂಡ ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳೆಲ್ಲರೂ ಸೇರಿಕೊಂಡು ಅಸಮಾಧಾನ ಹೊರಹಾಕಿದ್ದೆವು. ಆದರೀಗ ಅದನ್ನೇ ರಾಜ್ಯ ಸರ್ಕಾರ ಮುಂದುವರಿಸಿದೆ. ಇದು ಹೀಗೆ ಮುಂದುವರಿದರೆ ಪರಿಣಾಮ ನೆಟ್ಟಗಿರುವುದಿಲ್ಲ. ಮುಂದಿನ ದಿನಗಳಲ್ಲಿ ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳೆಲ್ಲರೂ ಒಗ್ಗೂಡಿಕೊಂಡು ಗಟ್ಟಿಯಾದ ನಿರ್ಧಾರ ಕೈಗೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ವಾಡಾ ಅಧ್ಯಕ್ಷಗಿರಿ ರಾಮಲಿಂಗಪ್ಪಗೆ: ವಿಜಯನಗರ ಅಭಿವೃದ್ಧಿ ಪ್ರಾಧಿಕಾರದ (ವಾಡಾ) ಅಧ್ಯಕ್ಷಗಿರಿ ಬಿಜೆಪಿ ಹಿರಿಯ ಮುಖಂಡ ಕೆ.ಎ. ರಾಮಲಿಂಗಪ್ಪ ಅವರಿಗೆ ನೀಡಿರುವುದಕ್ಕೆ ಸಂಡೂರು ತಾಲೂಕಿನ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಚರು ಅಸಮಾಧಾನ ವ್ಯಕ್ತಪಡಿಸಿರೋದು ನನ್ನ ಗಮನಕ್ಕೆ ಬಂದಿದೆ. ಅದನ್ನು ಕೂಡ ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿರುವೆ ಎಂದು ಎಸ್.ಚನ್ನ ಬಸವನಗೌಡ ಪಾಟೀಲ ತಿಳಿಸಿದರು.