ಬಳ್ಳಾರಿ: ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕೈಗಳನ್ನು ಸ್ಯಾನಿಟೈಸರ್, ಸೋಪಿನಿಂದ ಚೆನ್ನಾಗಿ ತೊಳೆದುಕೊಳ್ಳಿ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ ಸಲಹೆ ನೀಡಿದರು.
ಜಿಲ್ಲಾ ಆಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜೆಎಸ್‍ಡಬ್ಯ್ಲೂ ಆಡಳಿತ ಮಂಡಳಿ ಸಹಕಾರದೊಂದಿಗೆ ತೊರಣಗಲ್ಲಿನ ಎಸ್.ಪಿ, ಪಿ.ಪಿ, ಬಿಎಫ್, ಸಿಸಿಟಿ ಹಾಗೂ ಡಿಆರ್ಐ, ಐಜಿಪಿಎಲ್ ಮುಂತಾದ ಘಟಕಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಮತ್ತು ಅಧಿಕಾರಿಗಳಿಗೆ ಕೊರೊನಾ ಕುರಿತು ಜಾಗೃತಿ ಮೂಡಿಸಿದರು.
ಹೋಮ್ ಕ್ವಾರಂಟೈನ್‍ನಲ್ಲಿ ಇರುವವರು ಮನೆಯಿಂದ ಹೊರಗಡೆ ಓಡಾಡುವುದರಿಂದ ಇತರರಿಗೂ ಸೋಂಕು ಹರಡುತ್ತದೆ. ಯಾರಿಗಾದರೂ ಮೂಗು ಸೋರುವುದು, ತಲೆನೋವು, ಗಂಟಲು ನೋವು, ಒಣಕೆಮ್ಮು, ಜ್ವರ, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಿರಿ. ಸಹಾಯಕ್ಕಾಗಿ ಜಿಲ್ಲಾಡಳಿತದ ಸಹಾಯವಾಣಿ 08392-277100 ಅಥವಾ 8277888866 ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆಯಬಹುದು ಎಂದು ತಿಳಿಸಿದರು.