ಬಳ್ಳಾರಿ: ಮೇಲಧಿಕಾರಿಯ ಕಿರುಕುಳಕ್ಕೆ ಬೇಸತ್ತ ಗಣಿ ಜಿಲ್ಲೆಯ ಹೊಸಪೇಟೆ ವಿಭಾಗದ ಈಶಾನ್ಯ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಚಾರ ಪ್ರಸ್ತಾಪಿಸಿ ವಿಡಿಯೋ ಮಾಡಿದ್ದ. ಸದ್ಯ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇನ್ನು ಈ ವಿಡಿಯೋದಲ್ಲಿ ಅಳಲು ತೋಡಿಕೊಂಡಿರುವ ನೌಕರ, "ಕಳೆದ ಆರು ತಿಂಗಳಿಂದ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ನೀಡುತ್ತಿಲ್ಲ. ಹೀಗಾಗಿ, ನಾನು ನನ್ನ ಕುಟುಂಬ ಸಂಕಷ್ಟಕ್ಕೆ ಒಳಗಾಗಿದ್ದೇವೆ. ಈ ಕೋವಿಡ್ ಸಂದರ್ಭದಲ್ಲಿ ಕುಟುಂಬ ನಿರ್ವಹಿಸಲು ಕಷ್ಟಕರವಾಗಿದೆ. ಹೈ-ಕ ಭಾಗದ ನಿಗಮದ ಎಂಡಿ ಜಹೀರಾ ನಸೀಂ ಅವರು ನನಗೆ ಕರ್ತವ್ಯ ನಿರ್ವಹಿಸಲು ಅನುಮತಿ ನೀಡುತ್ತಿಲ್ಲ. ಅಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮೇಲಧಿಕಾರಿ ಕಿರುಕುಳ ನೀಡಿದರೂ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಜೀವ ತ್ಯಾಗ ಮಾಡಲು ಸಿದ್ಧನಿದ್ದೇನೆ. ಹೊಸಪೇಟೆ ವಿಭಾಗದಲ್ಲಿ ಎಲ್ಲಿಯೂ ಇಲ್ಲದ ಕಾನೂನಿದೆ" ಎಂದು ಹೇಳಿದ್ದಾರೆ. ಈ ವಿಡಿಯೋ ಭಾನುವಾರದಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇನ್ನು ಈ ಕುರಿತು ಸ್ಪಷ್ಟನೆ ನೀಡಿದ ಹೊಸಪೇಟೆ ಉಪವಿಭಾಗಾಧಿಕಾರಿ ಜಿ.ಶೀನಯ್ಯ ಅವರು, ಅಧಿಕಾರಿಗಳ ಮೇಲೆ ರೇಗಾಡಿದ್ದಾನೆ ಎಂಬ ಕಾರಣದಿಂದ ಕಳೆದ ಎಂಟು ತಿಂಗಳ ಹಿಂದೆ ನೌಕರ ಮೆಹಬೂಮ್ ಸಾಬ್ ಗುಡಿಮನಿ ಅವರನ್ನ ಸಸ್ಪೆಂಡ್ ಮಾಡಲಾಗಿತ್ತು. ಬಳಿಕ ಅವರ ಕರ್ತವ್ಯ ಸ್ಥಳವೆಂದು ಕೂಡ್ಲಿಗಿ ಡಿಪೋಗೆ ನಿಯೋಜಿಸಲಾಗಿತ್ತು. ಆದರೆ, ಆರೋಗ್ಯ ಸಮಸ್ಯೆ ಇದ್ದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ಮೆಹಬೂಮ್ ಅಧಿಕಾರಿಗಳಿಗೆ ತಿಳಿಸಿದ್ದ. ಆದ್ದರಿಂದ ಆರೋಗ್ಯ ಇಲಾಖೆಯ ಪ್ರಮಾಣಪತ್ರವನ್ನು ಕೇಳಲಾಗಿತ್ತು. ದಾಖಲೆಗಳನ್ನು ನೀಡದೇ ನೌಕರಿ ಕೊಟ್ಟಿಲ್ಲ. ಕರ್ತವ್ಯಕ್ಕೆ ಮರಳುವ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಸುಳ್ಳು. ಈ ವಿಡಿಯೋ ಕುರಿತು ವಿಚಾರಣೆ ನಡೆಸಲು ಕೂಡ್ಲಿಗಿ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಗಿದೆ ಎಂದರು.