ಬಳ್ಳಾರಿ: ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಬಳ್ಳಾರಿ ಎಪಿಎಂಸಿ ಮಾರುಕಟ್ಟೆ ಸಂಪೂರ್ಣವಾಗಿ ಕೆಸರುಮಯವಾಗಿದೆ. ವರ್ತಕರು ಕೆಸರಿನಲ್ಲಿಯೇ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಆದರೆ ಗ್ರಾಹಕರು ಕೆಸರು ಗದ್ದೆಯಲ್ಲಿ ತರಕಾರಿ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದು, ವರಮಹಾಲಕ್ಷ್ಮಿ ಹಬ್ಬವಿದ್ದರೂ ವರ್ತಕರಿಗೆ ನಷ್ಟವಾಗಿದೆ.
ಕಳೆದ ಹಲವು ವರ್ಷಗಳಿಂದಲೂ ವರ್ತಕರು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಂಬಂಧ ಸಾಕಷ್ಟು ಬಾರಿ ವರ್ತಕರು, ರೈತರು ಸಂಬಂಧಪಟ್ಟ ಎಪಿಎಂಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ತರಕಾರಿ ಮಾರಾಟ ಮಾಡಲು ಸಮರ್ಪಕ ವ್ಯವಸ್ಥೆ ಕಲ್ಪಿಸಿ ಎಂದು ಕೇಳಿಕೊಂಡರೂ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ತಿಳಿದುಬಂದಿದೆ.
ಬಳ್ಳಾರಿ ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಗಳು ಹಾಗೂ ಆಂಧ್ರದ ಗಡಿ ಜಿಲ್ಲೆಗಳಿಂದಲೂ ಬಳ್ಳಾರಿ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ತರಕಾರಿ ಮಾರಾಟ ಮಾಡಲು ರೈತರು ಬರುತ್ತಿದ್ದಾರೆ. ಆದರೆ ಇಲ್ಲಿನ ಮಾರುಕಟ್ಟೆ ಕೆಸರುಗದ್ದೆಯಾಗಿರುವುದರಿಂದ ತರಕಾರಿ ಮಾರಾಟ ಮಾಡಲು ತೊಂದರೆಯಾಗಿದೆ. ವರ್ತಕರಿಂದ ಶುಲ್ಕ ಪಡೆಯುವ ಎಪಿಎಂಸಿ, ಕನಿಷ್ಠ ತರಕಾರಿ ಮಾರಾಟ ಮಾಡಲು ಸಮರ್ಪಕ ವ್ಯವಸ್ಥೆ ಕಲ್ಪಿಸದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ :ಬೆಂಗಳೂರು: ಕೈಮಗ್ಗ ಮೇಳ ಉದ್ಘಾಟಿಸಿದ ಸಿಎಂ ಬೊಮ್ಮಾಯಿ