ಬಳ್ಳಾರಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ದಾಖಲೆಗಳು ಬೇಕಾದಲ್ಲಿ ನನ್ನ ಜೊತೆ ಬರಲಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಸವಾಲು ಹಾಕಿದ್ದಾರೆ.
ನಗರದ ಡಿಸಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಇಂತಹ ಸಂದರ್ಭದಲ್ಲಿ ಈ ರೀತಿಯಾಗಿ ತಮ್ಮ ಬಾಯನ್ನ ಹರಿಬಿಟ್ಟು ಮಾತನಾಡಬಾರದಿತ್ತು. ಕೋವಿಡ್ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ಖರೀದಿಸುವ ವೇಳೆ ಯಾವುದೇ ಭ್ರಷ್ಟಾಚಾರ ನಡೆದಿಲ್ಲವೆಂದು ಸ್ಪಷ್ಟಪಡಿಸಿದರು.
ಕೊರೊನಾ ಪರಿಕರಗಳನ್ನು ನಾನಾಗಲೀ ಅಥವಾ ಮುಖ್ಯಮಂತ್ರಿಗಳಾಗಲೀ ಖರೀದಿಸಲ್ಲ. ಕೋವಿಡ್ಗೆ ಸಂಬಂಧಿಸಿದ ಪರಿಕರಗಳ ಖರೀದಿಯನ್ನು ಟಾಸ್ಕ್ ಫೋರ್ಸ್ ಸಮಿತಿಯೇ ಮಾಡುತ್ತೆ. ಪೈಸೆ ಪೈಸೆಗೂ ಕೂಡ ಲೆಕ್ಕಪತ್ರ ಇರುತ್ತೆ. ಅವರು ಒಂದು ಬಾರಿ ನನ್ನೊಂದಿಗೆ ಬರಲಿ ತೋರಿಸುವೆ ಎಂದು ಸವಾಲೆಸೆದರು.
ಕೆಲ ರಾಜಕಾರಣಿಗಳು ಬಾಯಿ ಚಪಲಕ್ಕೆ ಮಾತನಾಡುತ್ತಾರೆ. ಕೆಲವರು ರಾಜಕಾರಣ ಮಾಡೋದಕ್ಕೋಸ್ಕರನೇ ಮಾತನಾಡುತ್ತಾರೆ. ಈ ರೀತಿಯಾಗಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಆಗಿದೆ ಅಂತ ಆರೋಪ ಮಾಡೋದು ತರವಲ್ಲ. ನಾವ್ ಏನ್ ಮಾಡ್ತೇವೆ ಅಂತ ಜನರು ಮೈಕ್ರೋಸ್ಕೋಪ್ ಇಟ್ಕೊಂಡು ನೋಡ್ತಾರೆ. ಹೀಗಾಗಿ, ಸಿದ್ದರಾಮಯ್ಯನರು ಈ ರೀತಿಯಾದ ಹೇಳಿಕೆ ನೀಡಬಾರದಿತ್ತು ಎಂದು ಸಚಿವ ಶ್ರೀರಾಮುಲು ಹೇಳಿದರು.