ಬಳ್ಳಾರಿ: ಹಂಪಿ ಉತ್ಸವವನ್ನು ಎರಡು ದಿನಗಳ ಬದಲಿಗೆ ಪ್ರತಿ ವರ್ಷದಂತೆ ಮೂರು ದಿನಗಳ ಕಾಲ ಆಚರಿಸಿ ಎಂದು ವಿವಿಧ ಕಲಾ ಸಂಘಟನೆಗಳು, ಕನ್ನಡ ಸಂಘಟನೆಗಳು ಮತ್ತು ಜಿಲ್ಲಾ ಕಾಂಗ್ರೆಸ್ ನಗರದ ರಾಯಲ್ ವೃತ್ತದಲ್ಲಿ ಪ್ರತಿಭಟನೆ ಮಾಡಿದವು.
ಎರಡು ದಿನಗಳ ಕಾಲ ಆಚರಿಸುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ವಿರೋಧಿಸಿ ವಿವಿಧ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಯಿತು. ನಂತರ ಜಿಲ್ಲಾಧಿಕಾರಿಗೆ ಈ ಕುರಿತು ಮನವಿ ಸಲ್ಲಿಸಿದರು.
ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಮಾತನಾಡಿ, ಹಂಪಿ ಉತ್ಸವ ಆಚರಣೆಗೆ ರಾಜ್ಯ ಸರ್ಕಾರದಿಂದ ಬಜೆಟ್ನಲ್ಲಿ ಪ್ರತಿ ವರ್ಷದಂತೆ ₹ 10 ಕೋಟಿ ಬಿಡುಗಡೆ ಮಾಡಬೇಕು. ಹಾಗೂ ನವೆಂಬರ್ 3, 4 ಮತ್ತು 5 ರಂದು ಆಚರಿಸಬೇಕು. ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ವೆಂಕಟೇಶ ಹೆಗಡೆ, ಮಹಾನಗರ ಪಾಲಿಕೆ ಸದಸ್ಯೆ ಪರ್ವಿನ್ ಭಾನು, ಪದ್ಮ ಮತ್ತು ಕಲಾವಿದರಾದ ಕೆ.ಜಗದೀಶ್, ಅಣ್ಣಾಜಿ ಕೃಷ್ಣರೆಡ್ಡಿ, ಸಿದ್ದರಾಮ ಕಲ್ಮಠ್ ಮತ್ತು ನೂರಾರು ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.