ಬಳ್ಳಾರಿ: ಜಿಲ್ಲೆಯ ಕಂಪ್ಲಿಯಲ್ಲಿ ಅನ್ನಭಾಗ್ಯ ಅಕ್ಕಿ ಕಳ್ಳಸಾಗಾಟದ ದೊಡ್ಡ ಜಾಲ ಪತ್ತೆಯಾಗಿದೆ. ಕಂಪ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೆ.ಎನ್.ಗಣೇಶ್ ಅವರು ರಾತ್ರೋರಾತ್ರಿ ದಾಳಿ ಮಾಡಿ ಅಕ್ರಮ ಸಾಗಾಣೆದಾರರನ್ನು ಪತ್ತೆ ಹಚ್ಚಿದ್ದಾರೆ.
"ಶೆಡ್‍ನಲ್ಲಿ 50 ಕೆ.ಜಿ ತೂಕದ ಅಂದಾಜು ಒಂದು ಸಾವಿರ ಅಕ್ಕಿ ಚೀಲಗಳು ದಾಸ್ತಾನಿದೆ. ಬಡವರಿಗೆ ವಿತರಣೆಯಾಗಬೇಕಾದ ಅನ್ನಭಾಗ್ಯ ಅಕ್ಕಿಯನ್ನು ಕಳೆದ ಒಂದು ವರ್ಷದಿಂದ ಗುಜರಾತ್ ಮತ್ತು ಬಿಹಾರ ರಾಜ್ಯಗಳಿಗೆ ಈ ಭಾಗದಿಂದ ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಇದರ ಹಿಂದೆ ಪ್ರಭಾವಿಗಳ ಕೈವಾಡವಿದ್ದು, ಕ್ರಮ ತೆಗೆದುಕೊಳ್ಳಬೇಕು" ಎಂದು ಶಾಸಕರು ಆಗ್ರಹಿಸಿದರು. ಸ್ಥಳಕ್ಕೆ ಭೇಟಿ ನೀಡಿದಾಗ ಅಕ್ಕಿ ಚೀಲಗಳನ್ನು ಲಾರಿಗೆ ಲೋಡ್ ಮಾಡಲಾಗುತ್ತಿತ್ತು. ಶೆಡ್ ಬಳಿ ಇದ್ದ ಕೆಲವರು ಪರಾರಿಯಾದರು ಎಂದು ಅವರು ಮಾಹಿತಿ ನೀಡಿದರು.
ದಾಳಿ ಬಳಿಕ ಬಂದ ಪೊಲೀಸರು ಸಾವಿರಾರು ಚೀಲ ಪಡಿತರ ಅಕ್ಕಿ ಹಾಗೂ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಅನ್ಯಭಾಷಿಕರು ಓಡಿ ಹೋಗಿದ್ದು, ನಾಲ್ವರು ಸಿಕ್ಕಿ ಬಿದ್ದಿದ್ದಾರೆ. ದಿನಕ್ಕೆ ಎರಡು ಲಾರಿ ಲೋಡ್ ಅಕ್ಕಿಯನ್ನು ಕಂಪ್ಲಿಯಿಂದ ತಮಿಳುನಾಡು, ಗುಜರಾತ್ ಕಡೆ ಸಾಗಣೆ ಮಾಡಲಾಗುತ್ತಿದೆ. ಒಂದು ಲಾರಿಯಲ್ಲಿ ನಾಲ್ಕು ನೂರು ಚೀಲ ಅಕ್ಕಿ ಸಾಗಾಟ ಮಾಡಲಾಗುತ್ತಿದ್ದು, ದಿನಕ್ಕೆ ಒಂದೂವರೆ ಲಕ್ಷ ರೂ. ಲಾಭವನ್ನು ಪ್ರಭಾವಿ ನಾಯಕರು ಪಡೆಯುತ್ತಾರೆ ಎಂಬ ಗಂಭೀರ ಆರೋಪವಿದೆ.
ಜಿಲ್ಲೆಯಲ್ಲಿ ಪಡಿತರ ಹಂಚಿಕೆಗೆ ಸರ್ಕಾರ ಗೋದಾಮಿನಲ್ಲಿ ಸಂಗ್ರಹಿಸಿದ್ದ ಸಾವಿರಾರು ಕ್ವಿಂಟಲ್ ಜೋಳ ಕಳವಾಗಿರುವ ಮಧ್ಯೆಯೇ ಅನ್ನಭಾಗ್ಯ ಅಕ್ಕಿ ಕಳ್ಳ ಸಾಗಾಣಿಕೆ ಜಾಲ ಪತ್ತೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಪಡಿತರ ಜೋಳ ನಾಪತ್ತೆ ಪ್ರಕರಣ: 16 ಜನರ ಮೇಲೆ ಎಫ್ಐಆರ್