ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ನಗರದಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗಳ ನಿಮಜ್ಜನ ವೇಳೆ ಸಾರ್ವಜನಿಕರು ಶಾಂತಿಭಂಗ ಉಂಟು ಮಾಡಬಾರದು. ಹಾಗೊಂದು ವೇಳೆ ಉಂಟಾದರೆ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮರ್ ಕುಮಾರ್ ಪಾಂಡೆ ಖಡಕ್ ಸೂಚನೆ ನೀಡಿದ್ದಾರೆ.
ಜಿಲ್ಲೆಯ ಸಿರುಗುಪ್ಪ ನಗರದ ಸಿಪಿಐ ಕಚೇರಿಗೆ ಭೇಟಿ ನೀಡಿ, ದೇಶನೂರು ಮಾರ್ಗವಾಗಿ ಗಣೇಶ ಮೂರ್ತಿಗಳ ಮೆರವಣಿಗೆ ಕೊಂಡೊಯ್ಯುವುದರ ಕುರಿತು ಸಾರ್ವಜನಿಕ ಸಭೆ ನಡೆಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ಮೂರ್ತಿಗಳ ನಿಮ್ಮಜ್ಜನ ವೇಳೆ ಕೈಗೊಂಡಿರುವ ಪೊಲೀಸರ ಬಿಗಿ ಬಂದೋಬಸ್ತ್ ಪರಿಶೀಲಿಸುವ ಸಲುವಾಗಿ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿರುವೆ. ಅದೇ ರೀತಿಯಾಗಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರಕ್ಕೂ ಭೇಟಿ ನೀಡಿದ್ದು, ನಗರದ ಮುಖಂಡರೊಂದಿಗೆ ಗಣೇಶಮೂರ್ತಿಗಳ ನಿಮ್ಮಜ್ಜನ ಮೆರವಣಿಗೆಯ ರಸ್ತೆಯ ಮಾರ್ಗದ ಕುರಿತು ಚರ್ಚಿಸಿರುವೆ. ಮುಖಂಡರು ಮಾತುಕತೆಯೊಂದಿಗೆ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಮೊಹರಂ ಹಾಗೂ ಗಣೇಶ ಹಬ್ಬವನ್ನು ಅತ್ಯಂತ ಶಾಂತಿಯುತವಾಗಿ ನೆರವೇರಿಸಲು ನಗರದ ವಿವಿಧ ಸಮುದಾಯದ ಮುಖಂಡರು ಭರವಸೆ ನೀಡಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆಯೂ ಕೂಡ ಬಹಳ ಮುತುವರ್ಜಿ ವಹಿಸಿದ್ದು, ಅಗತ್ಯ ಪೊಲೀಸ್ ಸಿಬ್ಬಂದಿಯನ್ನೂ ನಿಯೋಜನೆ ಮಾಡಿದೆ. ಯಾರೂ ಕೂಡ ಶಾಂತಿಭಂಗ ಉಂಟು ಮಾಡಬಾರದು, ಇದು ಪೊಲೀಸ್ ಇಲಾಖೆಯ ಎಚ್ಚರಿಕೆ ಮತ್ತು ವಿನಂತಿ. ಕಾನೂನನ್ನು ಯಾರು ಮೀರುತ್ತಾರೋ ಅಂಥವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ಮದ್ಯಪಾನ ಮಾಡಿ ಮೆರವಣಿಗೆಯಲ್ಲಿ ಬಂದವರನ್ನು ವಶಕ್ಕೆ ಪಡೆಯಲಾಗುವುದು. ಯಾವುದೇ ಅಹಿತಹರ ಘಟನೆ ನಡೆಯದಂತೆ ಸೂಕ್ತ ಸಿಬ್ಬಂದಿಗಳನ್ನು ನೇಮಿಸಲಾಗುವುದು ಎಂದರು.
ಇದೇ ವೇಳೆ ಮಾತನಾಡಿದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಮೂರು ಕೆಎಸ್ಆರ್ಪಿ ತುಕಡಿಗಳು ಸೇರಿದಂತೆ ಇನ್ನಿತರೆ ಸಿಬ್ಬಂದಿಗಳನ್ನು ಗಣೇಶ ಮೂರ್ತಿಗಳ ನಿಮ್ಮಜ್ಜನ ಮೆರವಣಿಗೆಯ ಬಂದೋಬಸ್ತ್ಗೆ ನಿಯೋಜಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು. ಬಳ್ಳಾರಿ ವಲಯ ಐಜಿಪಿ ನಂಜುಂಡಸ್ವಾಮಿ, ಡಿವೈಎಸ್ಪಿ ಅರುಣ ಕುಮಾರ್, ಸಿಪಿಐಗಳಾದ ಮೌನೇಶ್ವರ ಪಾಟೀಲ್, ಹಸನ್ ಸಾಬ್, ಪಿಎಸ್ಐ ಹೊಸಕೇರಪ್ಪ ಸಭೆಯಲ್ಲಿ ಇದ್ದರು.