ಬಳ್ಳಾರಿ: ಎರಡು ತಿಂಗಳ ಹಿಂದೆ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲೇ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿತ್ತು. ತಕ್ಷಣ ಎಚ್ಚೆತ್ತುಕೊಂಡ ಜಿಲ್ಲಾ ಆರೋಗ್ಯಾಧಿಕಾರಿ ಹೆಚ್.ಎಲ್. ಜನಾರ್ದನ ಅವರು ಜಿಲ್ಲೆಯ 11 ಕೋವಿಡ್ ಆಸ್ಪತ್ರೆಗಳಲ್ಲಿ ಅವಘಡ ಸಂಭವಿಸಿದಂತೆ ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚಿಸಿದ್ದರು ಎಂಬುದು ಈಗ ಬೆಳಕಿಗೆ ಬಂದಿದೆ.
ದೇಶದ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಸಾವು-ನೋವು ಸಂಭವಿಸುತ್ತಿದ್ದು, ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ತಮ್ಮ ಕಚೇರಿ ಮೆಟ್ಟಿಲು ಮೇಲಿದ್ದ ಫೈಯರ್ ಸ್ಟೇಷನ್ ಪಾಯಿಂಟ್ನಲ್ಲಿ ದುರಂತ ಸಂಭವಿಸಿತ್ತು. ಅಂದು ರಜಾ ದಿನ ಭಾನುವಾರವಾಗಿತ್ತು. ಅದನ್ನು ನಂದಿಸಲು ಕಚೇರಿ ಸಿಬ್ಬಂದಿ ಹರಸಾಹಸಪಟ್ಟರು ಎಂದು ಡಿಹೆಚ್ಒ ಜನಾರ್ದನ ಹೇಳಿದರು.
ಜಿಲ್ಲೆಯ ಕೋವಿಡ್ ಕೇರ್ ಸೆಂಟರ್ಗಳು ಹಾಗೂ ಆರೋಗ್ಯ ಇಲಾಖೆ ವ್ಯಾಪ್ತಿಯ ಕಚೇರಿಗಳಲ್ಲಿ ಫೈಯರ್ ಸ್ಟೇಷನ್ ಪಾಯಿಂಟ್ಗಳನ್ನು ತುಂಬುವಂತೆ ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಆದೇಶವನ್ನು ಆರೋಗ್ಯ ಇಲಾಖೆ ಜಾರಿಗೊಳಿಸಿದೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಡಿಹೆಚ್ಒ ಜನಾರ್ದನ, ನಮ್ಮ ಕಚೇರಿಯಲ್ಲಿ ಅಗ್ನಿ ಕಾಣಿಸಿಕೊಳ್ಳದಿದ್ದರೆ, ನಾವು ಫೈಯರ್ ಸ್ಟೇಷನ್ ಪಾಯಿಂಟ್ನತ್ತ ಗಮನ ಹರಿಸುತ್ತಿರಲಿಲ್ಲ. ಆ ದಿನ ಕೊಂಚಮಟ್ಟಿಗೆ ಅನಾಹುತ ಸಂಭವಿಸಿತ್ತು. ಅದು ನಮ್ಮನ್ನು ಮತ್ತಷ್ಟು ಜಾಗೃತರನ್ನಾಗಿ ಮಾಡಿತು. ಹೀಗಾಗಿ, ಸಕಾಲದಲ್ಲಿ ಫೈಯರ್ ಸ್ಟೇಷನ್ ಪಾಯಿಂಟ್ನಲ್ಲಿ ಅನಿಲ ತುಂಬಿಸಲು ಸೂಚನೆ ನೀಡಲಾಯಿತು ಎಂದು ಮಾಹಿತಿ ಹಂಚಿಕೊಂಡರು.
ಕೋವಿಡ್ ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ: ಜಿಲ್ಲೆಯ ಏಳು ತಾಲೂಕಿನ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲಾಗಿದೆ. ಅಲ್ಲದೆ, ಜಿಂದಾಲ್ ಓಪಿಜೆ ಸೆಂಟರ್ ಹಾಗೂ ಟ್ರಾಮಾಕೇರ್ ಸೆಂಟರ್, ಡೆಂಟಲ್ ಕಾಲೇಜು ಮತ್ತು ಬಳ್ಳಾರಿ ವಿಮ್ಸ್ ಕಾಲೇಜನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲಾಗಿದೆ. ಈ ಆಸ್ಪತ್ರೆಗಳಲ್ಲೂ ಫೈಯರ್ ಸ್ಟೇಷನ್ ಪಾಯಿಂಟ್ ಅನ್ನು ಗುರುತಿಸಲಾಗಿದೆ. ನಮ್ಮ ಕಚೇರಿಯಲ್ಲಾದ ಅವಘಡ ಬಿಟ್ಟರೇ ಯಾವ ಕೋವಿಡ್ ಆಸ್ಪತ್ರೆಗಳಲ್ಲೂ ಅವಘಡ ಸಂಭವಿಸಿಲ್ಲ. ಅದಕ್ಕೆ ಬೇಕಾದಂತಹ ಮುನ್ನೆಚ್ಚರಿಕಾ ಕ್ರಮ ವಹಿಸಿದ್ದೇವೆ ಎಂದು ವಿವರಿಸಿದರು.