ಬಳ್ಳಾರಿ: ನಗರದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಹಾಗೂ ಲಾಕ್‍ಡೌನ್ ಸಂದರ್ಭದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಮಹಾನಗರ ಪಾಲಿಕೆಯಿಂದ ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಪ್ರೀತಿ ಗೆಹ್ಲೋಟ್ ಅವರು ತಿಳಿಸಿದ್ದಾರೆ.
ಕೋವಿಡ್ ಸಮಯದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗಿದ್ದು, 39 ವಾರ್ಡಗಳಲ್ಲಿ ತಂಡಗಳನ್ನು ರಚಿಸಿ ಸಮೀಕ್ಷೆ ಕಾರ್ಯನಿರ್ವಹಿಸಲಾಗುತ್ತಿದೆ. ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಕೊರೊನಾ ಎರಡನೇ ಅಲೆ ಹಿನ್ನೆಲೆ ಸಂಪೂರ್ಣ ಲಾಕ್‍ಡೌನ್ ಮಾಡಿರುವುದರಿಂದ ಬಳ್ಳಾರಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಜನಸಂದಣಿ ಪ್ರದೇಶಗಳನ್ನು ಬಂದ್ ಮಾಡಲಾಗಿದೆ. ಎಲ್ಲಾ ವಾರ್ಡಗಳಲ್ಲಿ ಪ್ರತಿನಿತ್ಯ ಫ್ಯೂಮಿಗೇಷನ್ ಮಾಡಲಾಗುತ್ತಿದೆ. ಪೌರಕಾರ್ಮಿಕರಿಗೆ ಸುರಕ್ಷಾ ಪರಿಕರಗಳನ್ನು ಒದಗಿಸಲಾಗಿದೆ. ಪೌರಕಾರ್ಮಿಕರಿಗೆ ಆರೋಗ್ಯ ತಪಸಾಣೆ ಮಾಡಿಸಲಾಗಿದೆ. 5 ಇಂದಿರಾ ಕ್ಯಾಂಟಿನ್‍ಗಳಲ್ಲಿ ಮೂರು ಹೊತ್ತು ಉಚಿತ ಊಟ ಸರಬರಾಜು ಮಾಡಲಾಗಿದೆ. ಅಲ್ಲದೆ, ಕೋವಿಡ್-19ರ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು.
ಮಹಾನಗರ ಪಾಲಿಕೆಯಿಂದ ಕೈಗೊಂಡ ಕ್ರಮಗಳು
- ಜನಜಾಗೃತಿ: ಪಾಲಿಕೆಯ ಕಸ ಸಂಗ್ರಹಣೆ ವಾಹನಗಳಲ್ಲಿ ಮತ್ತು ಇತರೆ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸುವ ಆಡಿಯೊ ಜಿಂಗಲ್ಸ್ಗಳನ್ನು ಹಾಕಲಾಗುತ್ತಿದೆ. ಸಾಮಾಜಿಕ ಮಾಧ್ಯಮದ ಮೂಲಕ ಪಾಲಿಕೆಯ ವೆಬ್‍ಪೇಜ್, ಫೇಸ್‍ಬುಕ್ ಪೇಜ್, ವಾಟ್ಸ್ಆ್ಯಪ್ ಮೂಲಕ ಅನಿಮೇಷನ್ ವಿಡಿಯೋ ತುಣುಕುಗಳು, ಸಂದೇಶಗಳು, ಡಿಜಿಟಲ್ ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತಿದೆ. ಸಿಬ್ಬಂದಿ ನಗರದ ವಿವಿಧ ಪ್ರದೇಶಗಳ ಮನೆ-ಮನೆಗೆ ತೆರಳಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.
- ಜನಸಂದಣಿ ಪ್ರದೇಶಗಳನ್ನು ಮುಚ್ಚಿಸಿರುವುದು: ಬಳ್ಳಾರಿ ಮಹಾನಗರ ಪಾಲಿಕೆಯು ನಗರದ ಜನಸಂದಣಿ ಸ್ಥಳಗಳಾದ ಸಿನೆಮಾ ಟಾಕೀಸ್‍ಗಳು, ಹೋಟೇಲ್‍ಗಳು, ಶಾಪಿಂಗ್ ಮಳಿಗೆಗಳು, ವಾಣಿಜ್ಯ ಪ್ರದೇಶಗಳು, ಉಪಹಾರ ಗೃಹಗಳು ಇತ್ಯಾದಿಗಳನ್ನು ಮುಚ್ಚಿಸಿ ಜನರು ಗುಂಪಾಗಿ ಸೇರುವುದನ್ನು ತಪ್ಪಿಸಲು ಕ್ರಮಜರುಗಿಸಲಾಗಿದೆ.
- ಸಮೀಕ್ಷೆ: ಜಿಲ್ಲಾಡಳಿತದ ಸಹಯೋಗದೊಂದಿಗೆ ನಗರದ ಎಲ್ಲ 39 ವಾರ್ಡ್‍ಗಳಲ್ಲಿ ಮನೆ ಮನೆಗೆ ತೆರಳಿ ಕೋವಿಡ್ ಲಕ್ಷಣಗಳಿರುವವರ ಸಮೀಕ್ಷೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ವಾರ್ಡ್‍ವಾರು ತಂಡಗಳನ್ನು ರಚಿಸಲಾಗಿದೆ. ಅವಶ್ಯವಿದ್ದಲ್ಲಿ ಮೆಡಿಕಲ್ ಕಿಟ್ ನೀಡಲಾಗುತ್ತಿದೆ.
- ಸೋಂಕು ನಿವಾರಕ ಸಿಂಪಡಣೆ: ಬಳ್ಳಾರಿ ಮಹಾನಗರ ಪಾಲಿಕೆಯ ಎಲ್ಲಾ ವಾರ್ಡಗಳಲ್ಲಿನ ಮುಖ್ಯ ರಸ್ತೆ ಮತ್ತು ಬಡಾವಣೆಗಳಲ್ಲಿ ಪಾಲಿಕೆಯ ಜೆಟ್ಟಿಂಗ್ ಯಂತ್ರ, ನೀರಿನ ಟ್ಯಾಂಕರ್ಗೆ ಪಂಪ್ ಅಳವಡಿಸಿ ಮತ್ತು ಅಗ್ನಿಶಾಮಕ ದಳದ ವಾಹನ, ಎನ್.ಎಂ.ಡಿ.ಸಿಯ ಮಿಸ್ಟ್‍ಕ್ಯನಾನ್ ಯಂತ್ರಬಳಸಿ ಸೋಂಕುನಿವಾರಕವನ್ನು ಸಿಂಪಡಿಸಲಾಗುತ್ತಿದೆ. ನಗರದ ಇಕ್ಕಟ್ಟಾದ ಪ್ರದೇಶಗಳು/ ವಸತಿ ವಲಯಗಳಲ್ಲಿ, ಚಿಕ್ಕ ರಸ್ತೆಗಳಲ್ಲಿ, ಕೊಳಚೆ ಪ್ರದೇಶಗಳಲ್ಲಿ, ವಾಣಿಜ್ಯ ಪ್ರದೇಶಗಳಲ್ಲಿ, ಬಸ್ ನಿಲ್ದಾಣಗಳು, ತರಕಾರಿ ಮಾರ್ಕೆಟ್‍ಗಳು ಇತ್ಯಾದಿ ಕಡೆಗಳಲ್ಲಿ ಪೆಟ್ರೋಲ್ ಪಂಪ್ ಚಾಲಿತ ಬ್ಯಾಕ್‍ಪ್ಯಾಕ್ ಸ್ಪ್ರೇಯರಗಳು ಮತ್ತು ಹ್ಯಾಂಡ್ ಪಂಪ್ ಸ್ಪ್ರೇಯರಗಳನ್ನು ಬಳಸಿ ಸೋಂಕು ನಿವಾರಕವನ್ನು ಸಿಂಪಡಿಸಲಾಗುತ್ತಿದೆ.
- ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ: ನಗರದ ದೊಡ್ಡಮಾರ್ಕೆಟ್, ಸಣ್ಣಮಾರ್ಕೆಟ್, ಎ.ಪಿ.ಎಂ.ಸಿ, ಕೌಲ್ ಬಜಾರ್ ಮಾರ್ಕೆಟ್‍ನಲ್ಲಿ ಪ್ರತಿನಿತ್ಯ ಹೆಚ್ಚಿನ ಜನಸಂದಣಿ ಆಗುತ್ತಿದ್ದ ಕಾರಣ ನಗರದ ವಿವಿಧೆಡೆ ಒಟ್ಟು 7 ಸ್ಥಳಗಳಲ್ಲಿ (ಮುನಿಸಿಪಲ್ ಸ್ಕೂಲ್ ಮೈದಾನ, ಈದ್ಗಾಮೈದಾನ, ಸೇಂಟ್ ಜಾನ್ ಶಾಲಾ ಮೈದಾನ, ಕಿತ್ತೂರು ಚೆನ್ನಮ್ಮಶಾಲೆ ಮೈದಾನ, ವಿಮ್ಸ್ ಕಾಲೇಜು ಮೈದಾನ, ಐ.ಟಿ.ಐ ಕಾಲೇಜು ಮೈದಾನ, ಶ್ರೀರಾಂಪುರ ಕಾಲೋನಿ ಶಾಲೆ ಮೈದಾನ)ವ್ಯಾಪಾರ ಮಾಡಲು ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಎಲ್ಲಾ ಮಾರುಕಟ್ಟೆಗಳಲ್ಲಿ ಸೂಕ್ತ ಅಂತರಕಾಯ್ದುಕೊಳ್ಳಲು ಮಾರ್ಕಿಂಗ್ ಮಾಡಲಾಗಿದೆ.
- ಸ್ವಯಂ ಸೇವಕರ ನೇಮಕ: ಮಾರುಕಟ್ಟೆಗೆ ಬರುವ ಸಾರ್ವಜನಿಕರು ಅಂತರ ಕಾಯ್ದುಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳಲು ಸ್ವಯಂ-ಸೇವಾ ಸಂಘಗಳ ಸ್ವಯಂ ಸೇವಕರನ್ನು ಮತ್ತು ಪಾಲಿಕೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ ಎಲ್ಲ ದಿನಸಿ, ಔಷದ ಅಂಗಡಿಗಳ ಮುಂದೆಯೂ ಸಹ ಜನರು ಅಂತರದಲ್ಲಿ ನಿಲ್ಲಲು ಮಾರ್ಕಿಂಗ್ ಮಾಡಲಾಗಿದೆ. ಜನದಟ್ಟಣೆ ತಪ್ಪಿಸುವ ಮತ್ತು ಭೌತಿಕ ಅಂತರಕಾಯ್ದುಕೊಳ್ಳಲು ಅನುಕೂಲವಾಗಲು ಮುಖ್ಯ ತರಕಾರಿ ಮಾರುಕಟ್ಟೆಯ ವ್ಯಾಪಾರಿಗಳನ್ನು ನಗರದ ವಿವಿಧ ಮೈದಾನಗಳಿಗೆ ಸ್ಥಳಾಂತರಿಸಿ ಅಂತರಕಾಯ್ದುಕೊಳ್ಳಲು ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.
- ಪಾಲಿಕೆ ಸಿಬ್ಬಂದಿ,ಪೌರಕಾರ್ಮಿಕರ ಆರೋಗ್ಯ ರಕ್ಷಣೆ: ನಗರದ ಎಲ್ಲಾ ವಾರ್ಡ್‍ಗಳಲ್ಲಿ ಪ್ರತಿನಿತ್ಯ ಫ್ಯೂಮಿಗೇಷನ್ ಮಾಡಲಾಗುತ್ತಿದೆ. ಪೌರಕಾರ್ಮಿಕರಿಗೆ ಅವಶ್ಯವಿರುವ ಸುರಕ್ಷಾ ಧರಿಸುಗಳಾದ ಮಾಸ್ಕ್, ಕೈಗವಸ, ಶೂಗಳು, ರಿಫ್ಲೆಕ್ಟರ್ ಜಾಕೆಟ್‍ಗಳನ್ನು ವಿತರಿಸಲಾಗಿದೆ. ಎಲ್ಲಾ ಪೌರಕಾರ್ಮಿಕರಿಗೆ ಪ್ರತಿದಿನ ಥರ್ಮಲ್ ಸ್ಕ್ಯಾನಿಂಗ್ ಮೂಲಕ ತಾಪಮಾನ ಪರೀಕ್ಷಿಸಿ ಮುಂಜಾಗ್ರತೆ ವಹಿಸಲಾಗುತ್ತಿದೆ ಹಾಗೂ ಕೋವಿಡ್-19ರ ಬಗ್ಗೆ ವಿಶೇಷ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ, ಎಲ್ಲಾ ಪಾಲಿಕೆಯ ಸಿಬ್ಬಂದಿಗೆ ಹಾಗೂ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸಲಾಗಿದೆ.
- ಉಚಿತ ಊಟ: ಬಳ್ಳಾರಿ ನಗರದಲ್ಲಿರುವ ಎಲ್ಲಾ ಇಂದಿರಾ ಕ್ಯಾಂಟೀನ್‍ಗಳಲ್ಲಿ ಸ್ವಚ್ಛತೆ ಮತ್ತು ಭೌತಿಕ ಅಂತರಕಾಯ್ದುಕೊಳ್ಳಲು ಸೂಕ್ತ ವ್ಯವಸ್ಥೆಮಾಡಲಾಗಿದೆ. ಸರಕಾರದ ನಿರ್ದೇಶನದಂತೆ ಮೇ 11ರಿಂದ ನಗರದಲ್ಲಿರುವ 5 ಇಂದಿರಾ ಕ್ಯಾಂಟೀನ್ ಗಳಿಂದ ಮೂರು ಹೊತ್ತು ಉಚಿತ ಊಟ ಸರಬರಾಜು ಮಾಡಲಾಗುತ್ತಿದೆ.
- ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ: ಹೋಂ ಕ್ವಾರಂಟೈನ್ ಮನೆಗಳು ಅಥವಾ ಇತರೆ ಸ್ಥಳಗಳಿಂದ ನಿರ್ದೇಶನಾನುಸಾರ ಕಸವನ್ನು ಸಂಗ್ರಹಿಸಿ ನಿಯಮಾನುಸಾರ ವಿಲೇವಾರಿ ಮಾಡಲು, ಬಯೋಮೆಡಿಕಲ್ ವೇಸ್ಟ್ ಪ್ರೊಸೆಸ್ಸಿಂಗ್ ಏಜನ್ಸಿಗೆ ಜವಾಬ್ದಾರಿ ವಹಿಸಿ ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದೊಂದಿಗೆ ಸೂಕ್ತ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಕೋವಿಡ್-19ರ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತಿದೆ.