ಬಳ್ಳಾರಿ: ಎಲ್ಲ ಕಡೆಗಳಲ್ಲಿ ಹೆಚ್ಚಿದ ತಾಪಮಾನದಿಂದಾಗಿ ಜನರು ಬಳಲುವಂತಾಗಿದೆ. ಅಂತೆಯೇ ಬಳ್ಳಾರಿಯಲ್ಲೂ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ಜನರನ್ನು ಹೈರಾಣಾಗಿಸಿದೆ. ಸದ್ಯ ಗಣಿ ನಾಡಿನ ತಾಪಮಾನ ಶೇ 42 ಡಿಗ್ರಿ ತಲುಪಿದ್ದು, ಇದು 44 - 45 ಡಿಗ್ರಿ ವರೆಗೂ ಹೆಚ್ಚಳವಾಗಬಹುದು ಎಂದು ಅಂದಾಜಿಸಲಾಗಿದೆ. ಅಂತೆಯೇ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಸೆಕೆಯಿಂದಾಗಿ ಇನ್ನಷ್ಟು ಬಳಲುವಂತಾಗಿದೆ. ಇದೇ ಗಣಿನಾಡು ಬಳ್ಳಾರಿ ನಗರದಲ್ಲೊಂದು ಸರ್ಕಾರಿ ಕಚೇರಿಗೆ ಯಾವುದೇ ಬಿಸಿಲು ತಾಕುವುದಿಲ್ಲ. ಈ ಕಚೇರಿಗೆ ಎಸಿ ಬೇಕಿಲ್ಲ, ಫ್ಯಾನ್ ಬೇಕಿಲ್ಲ, ವರ್ಷದ ಎಲ್ಲ ದಿನಗಳಲ್ಲೂ ಈ ಕಚೇರಿ ತಂಪಾಗಿರುತ್ತದೆ.
ನಗರದ ಕೋಟೆ ಪ್ರದೇಶದಲ್ಲಿರುವ ಬಳ್ಳಾರಿ ಸೂಪರಿಂಟೆಂಡೆಟ್ ಅಂಚೆ ಕಚೇರಿ ಬೇಸಿಗೆ ಕಾಲದಲ್ಲೂ ತಂಪಾಗಿರುತ್ತದೆ. ಈ ಕಟ್ಟಡವನ್ನು ಬ್ರಿಟಿಷರ ಆಳ್ವಿಕೆಯಲ್ಲಿ ಐರೋಪ್ಯ ವಸಾಹತು ಪೂರ್ವ ಶೈಲಿಯಲ್ಲಿ ಕಟ್ಟಲಾಗಿದೆ. ಈ ಕಟ್ಟಡದ ಅಗಲವಾದ ಛಾವಣಿ, ವೃತ್ತಾಕಾರದ ಕಿಂಡಿಗಳು ನೋಡಲು ಸುಂದರವಾಗಿದೆ. ಸುಮಾರು 1870 ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲದಲ್ಲಿ ನಿರ್ಮಿಸಿರುವ ಈ ಕಟ್ಟಡದಲ್ಲಿ ಒಂದು ಪಿಲ್ಲರ್ ಕೂಡ ಇಲ್ಲ. ಇಲ್ಲಿ ಸುಮಾರು 30 ಕಮಾನುಗಳು, 16 ಬಾಗಿಲುಗಳು , ಒಟ್ಟು 58 ಅಡಿ ಅಗಲ, 166 ಅಡಿ ಉದ್ದ ಮತ್ತು 34.6 ಅಡಿ ಎತ್ತರ ಅಳತೆಯಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ವಿಶಿಷ್ಟ ಶೈಲಿಯಲ್ಲಿ ನಿರ್ಮಿಸಿರುವ ಈ ಕಟ್ಟಡದೊಳಗೆ ಹೇರಳವಾಗಿ ಗಾಳಿ ಬೆಳಕು ಬರುವುದರಿಂದ ತಂಪಾಗಿರುತ್ತದೆ.
ಈ ಕಚೇರಿಯಲ್ಲಿ ಫ್ಯಾನ್, ಲೈಟ್ಗಳು ಇದ್ದರೂ ಅವುಗಳನ್ನು ಬಳಸುವುದಿಲ್ಲ. ಇನ್ನು ಈ ಕಟ್ಟಡದ ಪಕ್ಕದಲ್ಲಿಯೇ ಪ್ರಸಿದ್ಧ ಏಕಾಶಿಲಾ ಬೆಟ್ಟವಿದ್ದರೂ ಬಿಸಿಲಿನ ಧಗೆ ಈ ಕಟ್ಟಡಕ್ಕೆ ತಾಗುವುದಿಲ್ಲ. ಅಂದಿನ ಕಾಲದಲ್ಲಿ ಈ ಕಟ್ಟಡವನ್ನು ಅತಿಥಿಗೃಹವಾಗಿ ಬಳಸುತ್ತಿದ್ದರು. ಬಳಿಕ ಮದ್ರಾಸ್ ಪ್ರೆಸಿಡೆನ್ಸಿ ಅವಧಿಯಲ್ಲಿ ಬಳ್ಳಾರಿ, ಅನಂತಪುರ, ಕರ್ನೂಲ್, ಕಡಪ ಜಿಲ್ಲೆಗಳ ಮುಖ್ಯ ಅಂಚೆ ಕಚೇರಿಯಾಗಿ ಬಳಕೆ ಆಗುತ್ತಿತ್ತು. ಇದೀಗ ಸೂಪರಿಂಟೆಂಡೆಂಟ್ ಕಚೇರಿಯಾಗಿದೆ.
ಬೇಸಿಗೆಯಲ್ಲೂ ತಂಪನ್ನು ನೀಡುವ ಈ ಕಟ್ಟಡವನ್ನು ಆಗಿನ ಕಾಲದಲ್ಲಿ ಬ್ರಿಟಿಷರು ಬಳ್ಳಾರಿಯ ಬಿಸಿಲು ತಡೆಯಲು ಇಂತಹ ಕಟ್ಟಡವನ್ನು ನಿರ್ಮಾಣ ಮಾಡಿರುವುದಾಗಿ ಹೇಳಲಾಗಿದೆ. ಸದ್ಯ ಬಳ್ಳಾರಿಯಲ್ಲಿ ಈಗ 40 - 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದರೂ, ಈ ಕಚೇರಿ ಒಂದರಲ್ಲಿ ಮಾತ್ರ ತಂಪಾದ ವಾತಾವರಣ ಇದೆ. ಕಚೇರಿ ಕೆಲಸದಲ್ಲಿ ಎಷ್ಟೇ ಒತ್ತಡವಿದ್ದರೂ ಕಚೇರಿಯಲ್ಲಿನ ವಾತಾವರಣದಿಂದ ಸಿಬ್ಬಂದಿ ಚೆನ್ನಾಗಿ ಕೆಲಸ ಮಾಡಬಹುದು ಎಂದು ಅಂಚೆ ಇಲಾಖೆ ಅಧೀಕ್ಷಕ ಚಿತಕೋಟೆ ಹೇಳಿದ್ದಾರೆ.
ಓದಿ: ರಾಜ್ಯ ಸಚಿವ ಸಂಪುಟ: ವಿಸ್ತರಣೆಯೋ? ಪುನರ್ ರಚನೆಯೋ? ಬಿಜೆಪಿ ಹೈಕಮಾಂಡ್ನ ನಿಗೂಢ ನಡೆ