ಬಳ್ಳಾರಿ: ತನ್ನ ವಿವಾಹೇತರ ಸಂಬಂಧದ ಇನ್ನೇನು ಬಯಲಾಗಿ ಬಿಡುತ್ತೆ ಎಂಬ ಭಯದಲ್ಲಿ ಮಹಿವೋರ್ವಳು ಹೀನ ಕೃತ್ಯವೆಸಗಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹೆತ್ತ ಮಗುವಿಗೆ ತಾಯಿ ಚಿತ್ರಹಿಂಸೆ ನೀಡಿರುವ ಅಮಾನವೀಯ ಪ್ರಕರಣ ಜಿಲ್ಲೆಯ ಸಿರುಗುಪ್ಪಾದಲ್ಲಿ ನಡೆದಿದೆ.
ಸಿರುಗುಪ್ಪಾ ನಗರದ ಮಹಿಳೆವೋರ್ವಳು ತನ್ನ 4 ವರ್ಷದ ಮಗಳಿಗೆ ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದಾಳೆ. ಪತಿಯಿಂದ ದೂರವಾಗಿದ್ದ ಈಕೆ ಕೂಲಿ ಕೆಲಸ ಮಾಡಿಕೊಂಡಿದ್ದಾಳೆ. ಬೇರೊಬ್ಬನೊಂದಿಗೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಾಳೆ ಎನ್ನಲಾಗ್ತಿದೆ. ಈ ಗುಟ್ಟು ಮುಗ್ಧ ಕಂದಮ್ಮನಿಗೆ ಗೊತ್ತಾಗುತ್ತೆ ಎಂಬ ಭಯದಿಂದ ಮಗುವಿನ ಗುಪ್ತಾಂಗ ಸೇರಿದಂತೆ ಇನ್ನಿತರೆ ಭಾಗಗಳಿಗೆ ಬೆಂಕಿ, ಕಟ್ಟಿಗೆಯಿಂದ ಸುಟ್ಟು ಗಾಯಗೊಳಿಸಿದ್ದಾಳೆ.
ನೆರೆಹೊರೆಯವರು ಮಗುವನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ ಮಗುವಿನ ತಾಯಿಗೆ ಸಾರ್ವಜನಿಕರು ಗೂಸಾ ಸಹ ನೀಡಿದ್ದಾರೆ. ಮಗುವಿನ ಗುಪ್ತಾಂಗಗಳ ಮೇಲೂ ಸುಟ್ಟ ಗಾಯಗಳಿವೆ. ಈ ಕುರಿತು ಸ್ಥಳೀಯರು ಪಾಪಿ ತಾಯಿ ವಿರುದ್ಧ ದೂರು ನೀಡಿದ್ದಾರೆ.
ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಆರ್. ನಾಗರಾಜ ಮಾತನಾಡಿ, ಮಗುವಿಗೆ ಚಿತ್ರಹಿಂಸೆ ನೀಡುವುದರ ಕುರಿತು ಮಾಹಿತಿ ಬಂದ ಹಿನ್ನಲೆ ದಾಳಿ ನಡೆಸಿ, ಮಗುವನ್ನು ರಕ್ಷಿಸಲಾಗಿದೆ. ಮಗುವಿನ ತಾಯಿಯ ವಿರುದ್ಧ ಜೆಜೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.