ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನಾದ್ಯಂತ ಎಡೆಬಿಡದೆ ಸುರಿದ ಮಳೆಗೆ ನೂರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆಗಳು ಜಲಾವೃತಗೊಂಡಿದ್ದು, ಮಳೆಯ ರಭಸಕ್ಕೆ ರೈತನೋರ್ವ ಹಳ್ಳದಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ.
ಕುರುಗೋಡು ತಾಲೂಕಿನ ಸಿದ್ಧಮ್ಮನಹಳ್ಳಿ, ಶ್ರೀನಿವಾಸ ನಗರ ಕ್ಯಾಂಪ್, ಮದಿರೆ ಕ್ಯಾಂಪ್, ಯಮ್ಮಿಗನೂರು, ಕೋಳೂರು, ಸೋಮಲಾಪುರ, ಬಾದನಹಟ್ಟಿ ಮತ್ತು ಬಳ್ಳಾರಿ ತಾಲೂಕಿನ ಸೋಮಸಮುದ್ರ ಸೇರಿದಂತೆ ಇತರೆ ಗ್ರಾಮಗಳ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳು ಜಲಾವೃತ್ತವಾಗಿವೆ. ಮಹಾ ಮಳೆಯಿಂದಾಗಿ ರೈತರು ಬೆಳೆದ ಬೆಳೆ ಸಂಪೂರ್ಣವಾಗಿ ನಾಶವಾಗುವ ಹಂತದಲ್ಲಿವೆ.
ಕೋಳೂರು- ಸೋಮಸಮುದ್ರ ಗ್ರಾಮಗಳ ವ್ಯಾಪ್ತಿಯಲ್ಲಿನ ಹಳ್ಳದ ನೀರು ಸುತ್ತಮುತ್ತಲಿನ ಜಮೀನುಗಳಿಗೆ ನುಗ್ಗಿದೆ. ಇದರಿಂದ ಜಮೀನಿನಲ್ಲಿ ಬೆಳೆದಿದ್ದ ಅಪಾರ ಪ್ರಮಾಣದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ ಎಂದು ಕೋಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜ ತಿಳಿಸಿದರು.
ರೈತನೋರ್ವ ಬೆಳೆಗೆ ಕ್ರಿಮಿನಾಶಕ ಔಷಧಿ ಖರೀದಿಸಿ ಮನೆಗೆ ವಾಪಾಸ್ ಬರುವಾಗ, ಸಿಂಧಿಗೇರಿ ಗ್ರಾಮ ಸಮೀಪದ ರಸ್ತೆ ಬದಿಯ ಹಳಕ್ಕೆ ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಮೃತ ರೈತ ಪಿ.ಟಿ ಸಿದ್ಧಪ್ಪ ಎಂದು ಗುರುತಿಸಲಾಗಿದೆ.
ಹಳ್ಳದಲ್ಲಿ ಕೊಚ್ಚಿ ಹೋದ ರೈತನ ಮೃತದೇಹ ಪತ್ತೆಯಾಗಿದ್ದು, ಕುಟುಂಬಸ್ಥರಿಗೆ ಅಗತ್ಯ ಪರಿಹಾರ ಧನ ವಿತರಿಸಬೇಕೆಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಮುಖಂಡ ವಿ.ಎಸ್. ಶಿವಶಂಕರ ಅವರು ಆಗ್ರಹಿಸಿದ್ದಾರೆ.