ಬಳ್ಳಾರಿ: ಕಳೆದ ನಾಲ್ಕೈದು ದಿನಗಳಿಂದ ಗಣಿ ಜಿಲ್ಲಾದ್ಯಂತ ಸುರಿದ ಮಹಾಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಅಂದಾಜು ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ.
ಜಿಲ್ಲೆಯಲ್ಲಿ ಸರಿಸುಮಾರು 277 ಮನೆಗಳು ಹಾನಿಯಾಗಿವೆ. ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 11 ಪ್ರಾಣಿಗಳು ಜೀವ ಕಳೆದುಕೊಂಡಿವೆ. ಅಂದಾಜು 4.30 ಕೋಟಿ ರೂ. ನಷ್ಟ ಈವರೆಗೆ ಸಂಭವಿಸಿರಬಹುದು ಎಂದು ಜಿಲ್ಲಾಡಳಿತ ಅಂದಾಜು ಪಟ್ಟಿ ತಯಾರಿಸಿದೆ.
ಬಳ್ಳಾರಿ ತಾಲೂಕಿನಲ್ಲಿ 39 ಮನೆಗಳಿಗೆ ಹಾನಿಯಾಗಿದ್ದು, 3.9 ಲಕ್ಷ ರೂ. ನಷ್ಟ ಉಂಟಾಗಿದೆ. 826.31 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, 111.50 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಭತ್ತ, ಹತ್ತಿ, ಮೆಣಸಿನಕಾಯಿ ಬೆಳೆ ನೀರಿನಲ್ಲಿ ಮುಳುಗಡೆಯಾಗಿ ಹೋಗಿದೆ. ನೀರು ನಿಂತಿರುವುದರಿಂದ ಜಂಟಿ ಸಮೀಕ್ಷೆ ಮಾಡೋದು ಬಾಕಿಯಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.