ಬಳ್ಳಾರಿ : ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಪ್ರತಿ ವಾರ್ಡಿಗೂ 24X7 ಕುಡಿಯುವ ನೀರು ಪೂರೈಕೆ ಯೋಜನೆ ಸಮರ್ಪಕ ಜಾರಿಗೊಂಡ್ರೆ ಮಾತ್ರ ಅನಗತ್ಯ ನೀರು ಪೋಲಾಗೋದನ್ನ ತಡೆಗಟ್ಟಲು ಸಾಧ್ಯತೆ ಎಂದು ಆಯುಕ್ತೆ ತುಷಾರಮಣಿ ತಿಳಿಸಿದರು.
ಬಳ್ಳಾರಿಯ 28 ವಲಯಗಳಿಗೆ ಈಗಾಗಲೇ 24X7 ನೀರು ಪೂರೈಕೆ ಯೋಜನೆಯ ಪೈಪ ಲೈನ್ ಅಳವಡಿಕೆ ಕಾರ್ಯವು ಮುಕ್ತಾಯಗೊಂಡಿದೆ. ಡಿಸೆಂಬರ್ ತಿಂಗಳಾಂತ್ಯಕ್ಕೆ ನಿರಂತರ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತೆ. ಮುಂದಿನ ವರ್ಷದಲ್ಲಿ ಉಳಿದ 15 ವಲಯಗಳಿಗೆ ಪೈಪ್ ಲೈನ್ ಅಳವಡಿಸೋ ಕಾರ್ಯ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.
ಸದ್ಯ ಅಲ್ಲೀಪುರ-ಮೋಕಾ ಕುಡಿಯುವ ನೀರಿನ ಕೆರೆಯಿಂದ ಬಳ್ಳಾರಿ ಮಹಾನಗರಕ್ಕೆ ಅಂದಾಜು 75 ಎಂಎಲ್ಡಿ ನೀರನ್ನ ಪೂರೈಕೆ ಮಾಡಲಾಗುತ್ತೆ. ಅದರಲ್ಲಿ ಸಾಕಷ್ಟು ನೀರು ಅನಗತ್ಯ ಪೋಲಾಗುತ್ತೆ. ಯಾಕೆಂದರೆ, ಮಹಾನಗರದಲ್ಲಿ ಹಳೆಯ ಕಾಲದ ಪೈಪ್ ಲೈನ್ ಪದ್ಧತಿ ಜಾರಿಯಲ್ಲಿದೆ. ಆ ಪೈಪ್ ಲೈನ್ ನೊಗೆ ಎಲ್ಲೆಂದರಲ್ಲಿ ಪೈಪ್ ಹೊಡೆದು ಅನಗತ್ಯ ನೀರು ಪೋಲಾಗುತ್ತಿರೋದು ಬೆಳಕಿಗೆ ಬಂದಿದೆ. ಅದನ್ನ ತಡೆಗಟ್ಟಲು ಬಳ್ಳಾರಿ ಮಹಾನಗರ ಪಾಲಿಕೆಯು ಹಲವು ಪ್ರಯತ್ನ ನಡೆಸಿ, ಅದರಲ್ಲಿ ಯಶ ಕಂಡಿದೆ.
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತೆ ಎಂ ವಿ ತುಷಾರಮಣಿ ಅವರು, ಹಳೆಯ ಕಾಲದ ಪೈಪ್ ಲೈನ್ ಪದ್ಧತಿ ಜಾರಿಯಲ್ಲಿರೋದರಿಂದ ಅನಗತ್ಯ ನೀರು ಪೋಲಾಗುತ್ತಿರೋದು ಕಳೆದ ವರ್ಷ ಸಾಕಷ್ಟು ಕಂಡು ಬಂದಿತ್ತು. ಅಲ್ಲೀಪುರ-ಮೋಕಾ ಕುಡಿಯುವ ನೀರಿನ ಕೆರೆಯಿಂದ 75 ಎಂಎಲ್ಡಿ ಪೈಕಿ ಬಹುತೇಕ ನೀರು ಪೋಲಾಗುತ್ತಿತ್ತು. ಆ ಬಗ್ಗೆ ಸಾಕಷ್ಟು ಕಂಪ್ಲೇಂಟ್ ಕೂಡ ಬಂದಿದ್ದವು. ಹೀಗಾಗಿ, ಹೊಸ ಪೈಪ್ ಲೈನ್ ಅಳವಡಿಸಲು 14ನೇಯ ಹಣಕಾಸು ಯೋಜನೆಯಡಿ ಒಂದು ಕೋಟಿ ರೂಪಾಯಿಗೂ ಅಧಿಕ ಹಣ ಮೀಸಲಿಡಲಾಗಿತ್ತು.
ಎಲ್ಲೆಂದರಲ್ಲಿ ಪೈಪ್ ಡ್ಯಾಮೇಜ್ ಅಗೋದನ್ನ ಪತ್ತೆಹಚ್ಚಿ ಆ ಸ್ಥಳದಲ್ಲೇ ಹೊಸದಾಗಿ ಪೈಪ್ ಲೈನ್ ಮಾಡೋ ಮುಖೇನ ಅನಗತ್ಯ ನೀರು ಪೋಲಾಗೋದನ್ನ ತಡೆ ಗಟ್ಟಲು ಸಾಧ್ಯವಾಗಿದೆ ಎಂದು ಆಯುಕ್ತೆ ತುಷಾರಮಣಿ ತಿಳಿಸಿದರು. ಇದಲ್ಲದೇ, ಓವರ್ ಹೆಡ್ ಭರ್ತಿಯಾಗೋದು ಗೊತ್ತಾಗದೇ ಕೂಡ ನೀರು ಪೋಲಾಗುತ್ತಿತ್ತು. ಅದನ್ನ ತಡೆಯುವ ಸಲುವಾಗಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಇನ್ಮುಂದೆಯೂ ಕೂಡ ಓವರ್ ಹೆಡ್ ಟ್ಯಾಂಕ್ ಭರ್ತಿಯಾದ್ರೆ ಸಾಕು ಕೂಡಲೇ ಗೊತ್ತಾಗಲಿದೆ. ಅನಗತ್ಯ ನೀರು ಪೋಲಾಗೋದನ್ನ ತಡೆಗಟ್ಟಬಹುದು ಎಂದರು ಆಯುಕ್ತೆ ತುಷಾರಮಣಿ.
ಕೋಟ್ಯಂತರ ರೂ. ಕರ ವಸೂಲಿ ಬಾಕಿ : ಈ ಹಿಂದಿನಿಂದಲೂ ಕೋಟ್ಯಂತರ ರೂ.ಗಳ ನೀರಿನ ಕರ ವಸೂಲಿ ಬಾಕಿಯಿದೆ. ಕಳೆದ ಬಾರಿ ಕೇವಲ 5 ಕೋಟಿ ರೂ. ಮಾತ್ರ ಕರ ವಸೂಲಾತಿಯಾಗಿದೆ. ಹೀಗಾಗಿ, ಮನೆ ಮನೆಗೆ ತೆರಳಿ ನೀರಿನ ಕರ ವಸೂಲಿ ಮಾಡೋರನ್ನ ನೇಮಕ ಮಾಡಿಕೊಳ್ಳಲಾಗಿದೆ. ಕರ ವಸೂಲಿ ಕಾರ್ಯದ ವೇಗ ನಿಧಾನಗತಿಯಲ್ಲಿ ಸಾಗಿದೆ.