ವಿಜಯನಗರ: ಮನೆಯಲ್ಲಿ ಕೆಲಸ ಮಾಡುವುದು ಬಿಟ್ಟು ಮೊಬೈಲ್ನಲ್ಲಿ ಗೇಮ್ ಆಡ್ತಿದ್ದಿಯಾ ಎಂದು ಪಾಲಕರು ತಿಳಿಹೇಳಿದ್ದಕ್ಕೆ ಮನನೊಂದ 17 ವರ್ಷದ ಹುಡುಗ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಕೂಡ್ಲಿಗಿ ತಾಲೂಕಿನ ಹಾಲಸಾಗರ ಗ್ರಾಮದಲ್ಲಿ ನಡೆದಿದೆ. ಹಾಲಸಾಗರ ನಿವಾಸಿ ಉಮೇಶ (17) ಸಾವನ್ನಪ್ಪಿರುವ ಬಾಲಕ.
ಈತ ಬಳ್ಳಾರಿಯ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಜುಲೈ 4ರಂದು ಕಾಲೇಜಿನಿಂದ ಮನೆಗೆ ಬಂದಿದ್ದ. ಬಳಿಕ ಮೊಬೈಲ್ ಹಿಡಿದು ಗೇಮ್ ಆಡಲು ಶುರು ಮಾಡಿದ್ದಾನೆ. ಇದನ್ನು ಗಮನಿಸಿದ ತಂದೆ, ಮನೆಯಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಗೇಮ್ ಆಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಉಮೇಶ್ ಸರಿಯೆಂದು ಸ್ವಲ್ಪ ಸಮಯದವರೆಗೆ ಕಟ್ಟಿಗೆ ಕಡಿಯುವ ಕೆಲಸ ಮಾಡಿದ್ದ.
ಇದನ್ನೂ ಓದಿ: ಕೊಪ್ಪಳದಲ್ಲಿ ರೈಲಿಗೆ ಸಿಲುಕಿ ಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆ
ಕೆಲಸ ಮುಗಿಸಿದ ಬಳಿಕ ಮತ್ತದೇ ಮೊಬೈಲ್ ಗೇಮ್ ಶುರು ಮಾಡಿದ್ದಾನೆ. ಆಗ ತಂದೆ ತಾಯಿ ಇಬ್ಬರೂ ಗೇಮ್ ಆಡಬೇಡ ಎಂದು ಹೇಳಿದ್ದಾರೆ. ಇಷ್ಟಕ್ಕೆ ಬೇಸರಗೊಂಡ ಬಾಲಕ ಜುಲೈ 4ರಂದು ಸಂಜೆ ಮನೆಯಿಂದ ಹೊರಹೋಗಿದ್ದಾನೆ. ರಾತ್ರಿಯಾದ್ರೂ ಮನೆಗೆ ಬಾರದಿರುವ ಕಾರಣ ಗಾಬರಿಗೊಂಡ ಪೋಷಕರು ಗ್ರಾಮದಲ್ಲಿ ಹುಡುಕಾಡಿದ್ದಾರೆ. ಮಗನ ಪತ್ತೆ ಸಿಗದಾಗ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲು ಹೋಗಿದ್ದಾರೆ. ಅಷ್ಟರಲ್ಲೇ ಅದೇ ಗ್ರಾಮದ ಬಾವಿಯಲ್ಲಿ ಬಾಲಕನ ಶವ ದೊರೆತಿದೆ. ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.