ಬಳ್ಳಾರಿ : ಜಿಲ್ಲೆಯ ನಾನಾ ಕಡೆಗಳಲ್ಲಿ ಅಕ್ರಮವಾಗಿ ಬೆಳೆದಿದ್ದ 105 ಕೆಜಿ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಈವರೆಗೂ 31 ಮಂದಿಯನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ 20 ದಿನಗಳಲ್ಲಿ ಜಿಲ್ಲೆಯ 17 ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಈ ವೇಳೆ ಅಂದಾಜು 105 ಕೆಜಿ ಗಾಂಜಾ ಜಪ್ತಿಗೊಳಿಸಲಾಗಿದೆ. 31 ಆರೋಪಿಗಳನ್ನು ಬಂಧಿಸಲಾಗಿದೆ. ಅಂದಾಜು 39 ಮಂದಿಯನ್ನು ಆರೋಪಿತರೆಂದು ಗುರುತಿಸಲಾಗಿದೆ ಎಂದರು.
ಬಳ್ಳಾರಿ, ಸಿರುಗುಪ್ಪ ಹಾಗೂ ಹೊಸಪೇಟೆ ತಾಲೂಕಿನಿಂದ ಬೇರೆಡೆಗೆ ಗಾಂಜಾ ಸಾಗಿಸುತ್ತಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಆ ಮೂಲಗಳನ್ನ ಪತ್ತೆಹಚ್ಚುವ ಕಾರ್ಯ ಮಾಡಲಾಗುತ್ತಿದೆ. ಗಾಂಜಾ ಬೆಳೆದ ಹಾಗೂ ಸಾಗಣೆ ಮಾಡುವವರ ವಿರುದ್ಧ ಡ್ರಗ್ಸ್ ನಿಯಂತ್ರಣ ಕಾಯ್ದೆ ಅನ್ವಯ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.