ಚಿಕ್ಕೋಡಿ : ಮಹಾರಾಷ್ಟ್ರದಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯವನ್ನು ಸಂಪರ್ಕಿಸುವ ಬೆಳಗಾವಿ ಜಿಲ್ಲೆಯ ಗಡಿ ಭಾಗದ ಎಲ್ಲಾ ರಸ್ತೆಗಳನ್ನು ಮುಚ್ಚಲಾಗಿದೆ. ಈ ಹಿನ್ನೆಲೆ ಮಹಾರಾಷ್ಟ್ರ ಮೂಲದ ಯುವಕನೋರ್ವ ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಹಾಗೂ ಕಾಗವಾಡ ಪಟ್ಟಣದ ಮೂಲಕ ಕೋವಿಡ್ ದಾಖಲೆಗಳೊಂದಿಗೆ ಮಾತ್ರ ರಾಜ್ಯ ಪ್ರವೇಶಿಸಲು ಸರ್ಕಾರ ಆದೇಶಿಸಿದೆ. ಉಳಿದ ರಸ್ತೆಗಳನ್ನು ಬಂದ್ ಮಾಡಲು ಜಿಲ್ಲಾಡಳಿತ ಆದೇಶ ನೀಡಿತ್ತು. ಹೀಗಾಗಿ, ಅಧಿಕಾರಿಗಳು ಜಿಲ್ಲಾಡಳಿತದ ಆದೇಶದಂತೆ ಗಡಿಯಲ್ಲಿರುವ ರಸ್ತೆಗಳನ್ನು ಬಂದ್ ಮಾಡಿದ್ದಾರೆ.
ಅದರಂತೆ ಕರ್ನಾಟಕ-ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಯಕ್ಸಂಬಾ-ದಾನವಾಡ ರಸ್ತೆ ಬಂದ್ ಮಾಡಲಾಗಿದೆ. ಇದರಿಂದ ಮಹಾರಾಷ್ಟ್ರದ ಮೂಲದ ಯುವಕನೋರ್ವ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಮಹಾರಾಷ್ಟ್ರ- ಕರ್ನಾಟಕ ಅಂದರೆ ಭಾರತ- ಪಾಕಿಸ್ತಾನವೇ? ಎಂದು ಗಡಿಯಲ್ಲಿ ನಿಂತು ಆಕ್ರೋಶ ಹೊರ ಹಾಕಿದ್ದಾನೆ.
ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಬೇಡವೆಂದರೆ ಗೋಡೆ ಹಾಕಿ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಿ. ಮಹಾರಾಷ್ಟ್ರದ ಜನರ ಸಾಕಷ್ಟು ಪ್ರಮಾಣದ ಭೂಮಿ ಕರ್ನಾಟಕದಲ್ಲಿದೆ. ಎರಡು ರಾಜ್ಯದ ಜನರು ದುಡಿಯಲು ಈ ರಸ್ತೆ ಅವಲಂಬಿಸಿದ್ದಾರೆ. ಇದರಿಂದ ಸಾರ್ವಜನಿಕರರಿಗೆ ಹಾಗೂ ರೈತರಿಗೆ ತೊಂದರೆಯಾಗುತ್ತಿದೆ ಎಂದು ಯುವಕ ಅಸಮಾಧಾನ ಹೊರ ಹಾಕಿದ್ದಾನೆ.